

ತುಮಕೂರು: ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಹೋರಾಟಕ್ಕೆ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಹೇರಿರುವ ನಿರ್ಬಂಧಗಳನ್ನು ಸಡಿಲಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ತಜ್ಞರ ಸಮಿತಿ ನೇಮಿಸುವಂತೆ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಶ್ರೀಗಳು ಹೇಳಿದರು.
ಜ.6ರಂದು ವಿವಿಧ ಬೇಡಿಕೆ ಈಡೇರಿಸುವಂತೆ ಬೆಂಗಳೂರಿನಲ್ಲಿ ಹೋರಾಟ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ)ದ ಪದಾಧಿಕಾರಿಗಳು ಸರ್ಕಾರದ ಗಮನಸೆಳೆಯುವ ನಿಟ್ಟಿನಲ್ಲಿ ಶ್ರೀಗಳಲ್ಲಿ ಮನವಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಶೈಕ್ಷಣಿಕ ಪ್ರಗತಿಯಲ್ಲಿ ಖಾಸಗಿ ಶಾಲೆಗಳು, ಮಠಮಾನ್ಯಗಳ ಪಾತ್ರ ಬಹುದೊಡ್ಡದಿದೆ. ಕರೊನಾ ಸಂಕಷ್ಟದಲ್ಲಿ ಸಿಲುಕಿದ ರೈತರು, ಕೃಷಿಕಾರ್ಮಿಕರ ಬೆಂಬಲಕ್ಕೆ ನಿಂತ ಸರ್ಕಾರವು ಖಾಸಗಿ ಶಾಲೆಗಳಿಗೆ ವಿಶೇಷ ಪ್ಯಾಕೇಜ್ ನೀಡಿ ಪ್ರೋತ್ಸಾಹಿಸಬೇಕು ಎಂದರು.
ಪ್ರಸ್ತುತ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಅನೇಕ ನಿರ್ಬಂಧಗಳನ್ನು ಹೇರಿದ್ದು, ಸಾಕಷ್ಟು ಕಾನೂನಾತ್ಮಕ ತೊಡಕುಗಳು ಉಂಟಾಗುತ್ತಿವೆ. ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣಕ್ಕೆ ಭರಿಸಲಾಗದ ನಿರ್ಬಂಧಗಳನ್ನು ಸಡಿಲಗೊಳಿಸಬೇಕು. ಸುಪ್ರೀಂಕೋರ್ಟ್ ಆದೇಶದ ನೆಪವೊಡ್ಡಿ ಸರ್ಕಾರ ಕಠಿಣ ನಿಯಮಗಳನ್ನು ಹೇರಿದ್ದು, ಇದನ್ನು ಸರಳೀಕರಣಗೊಳಿಸಬೇಕು. ಈ ಸಂಬಂಧ ತಜ್ಞರ ಸಮಿತಿ ರಚಿಸಿ ಅನುಕೂಲ ಮಾಡಿಕೊಡಬೇಕು. ಮಕ್ಕಳ ಸುರಕ್ಷತಾ ಕ್ರಮಕ್ಕೆ ನಾವೆಲ್ಲಾ ಹೆಚ್ಚು ಒತ್ತು ಕೊಡುತ್ತೇವೆ ಎಂದು ಹೇಳಿದರು.
ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಗೊಳಿಸದಿದ್ದರೆ ಮಕ್ಕಳ ಶಿಕ್ಷಣಕ್ಕೆ ತುಂಬ ತೊಂದರೆಯಾಗಲಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು. ಈಗಾಗಲೇ ಕರೊನಾ ಸಂದರ್ಭದಲ್ಲಿ ಶಿಕ್ಷಕರಿಗೆ ಸಂಬಳ ಕೊಡಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಷ್ಟಕರವಾಗಿದೆ. ಸಾಲಸೋಲ ಮಾಡಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಇಎಂಐ ಕಟ್ಟಲು ಪರದಾಡುವಂತಾಗಿದೆ. ಈಗ ಇಂತಹ ನಿರ್ಬಂಧಗಳನ್ನು ಹೇರಿರುವುದು ಸಾಧುವಲ್ಲ. ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದರು.
ರುಪ್ಸಾ ಕಾರ್ಯಾಧ್ಯಕ್ಷ ಹಾಲನೂರು ಲೇಪಾಕ್ಷಿ, ಶ್ರೀನಿವಾಸ್ ರಾವ್, ನಾರಾಯಣಮೂರ್ತಿ, ಚಂದ್ರಶೇಖರ್, ಬಿ.ಎಸ್.ಮಂಜುನಾಥ್ ಉಪಸ್ಥಿತರಿದ್ದರು.
ಮಕ್ಕಳ ನಡುವೆ ತಾರತಮ್ಯ ಬೇಡ: ಖಾಸಗಿ ಶಾಲೆ ಮಕ್ಕಳ ಸುರಕ್ಷತೆಗೆ ಸರ್ಕಾರ ಹಲವು ಕಠಿಣ ಕ್ರಮಕೈಗೊಂಡಿದೆ. ಆದರೆ, ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಕಂಡಾಗ ಆ ಮಕ್ಕಳ ಬಗ್ಗೆ ಸರ್ಕಾರ ಏಕೆ ಗಮನಹರಿಸುತ್ತಿಲ್ಲ. ಈ ಮಕ್ಕಳಂತೆ ಸರ್ಕಾರಿ ಶಾಲೆ ಮಕ್ಕಳ ಸುರಕ್ಷತೆಗೂ ಒತ್ತು ಕೊಡಬೇಕಾದ್ದು ಅವರ ಕರ್ತವ್ಯ. ಮಕ್ಕಳ ನಡುವೆ ಈ ತಾರತಮ್ಮ ಬೇಡ ಎಂದು ಸಿದ್ದಲಿಂಗ ಶ್ರೀಗಳು ಹೇಳಿದರು.
ರಾಜ್ಯದ ಖಾಸಗಿ ಶಾಲೆಗಳು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಹಿತದೃಷ್ಟಿಯಿಂದ ರುಪ್ಸಾ ಕರ್ನಾಟಕ ಕಳೆದ 3 ತಿಂಗಳಿನಿಂದ ಹೋರಾಟ ನಡೆಸುತ್ತಿದೆ. ಈವರೆಗೆ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಬೆಂಗಳೂರಿನಲ್ಲಿ ಬುಧವಾರ ಖಾಸಗಿ ಶಾಲೆಗಳ ಶಿಕ್ಷಕರ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು. ಹಾಲನೂರು ಲೇಪಾಕ್ಷಿ ರುಪ್ಸಾ ಕಾರ್ಯಾಧ್ಯಕ್ಷ