ವೀರಶೈವ ಧರ್ಮದಲ್ಲಿ ಭೇದವಿಲ್ಲ

13 JLR 3
Published on

ಜಗಳೂರು: ಕೆಲವು ಧರ್ಮಗಳಲ್ಲಿ ಹೆಣ್ಣು -ಗಂಡು ಎಂಬ ಭೇದವಿದೆ. ಆದರೆ ವೀರಶೈವ ಲಿಂಗಾಯಿತ ಧರ್ಮ ಹುಟ್ಟಿನಿಂದಲೇ ಹೆಣ್ಣಿಗೆ ಪುರುಷನಷ್ಟೇ ಸಮಾನತೆ ನೀಡಿದೆ ಎಂದು ಉಜ್ಜಿಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಬುಧವಾರ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯುತ್ಸವ ಹಾಗೂ ಪಂಚಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಲಿಂಗವನ್ನು ಧರಿಸಿದ ಮೇಲೆ ಜಾತಿ ಮರೆತು ವೀರಶೈವ ಲಿಂಗಾಯತ ಧರ್ಮದವರಾಗಿ ಬಾಳಬೇಕು. ಅವರವರ ಕಸುಬಿನ ಮೇಲೆ ಜಾತಿಗಳು ಹುಟ್ಟಿಕೊಂಡಿವೆ. ಉಜ್ಜಯಿನಿ ಪೀಠಕ್ಕೆ ಎಲ್ಲ ಜಾತಿ ಜನಾಂಗದವರು ಶಿಷ್ಯರಾಗಿದ್ದಾರೆ. ಈ ಪೀಠ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ಎಷ್ಟೋ ಧರ್ಮ, ಮತ, ಪಂಥ ಹುಟ್ಟಿ ಅಳಿದರೂ, ಇಂದಿಗೂ ಮುಂದೆಯೂ ಇರುವುದು ವೀರಶೈವ ಧರ್ಮ ಎಂದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ಉಜ್ಜಯಿನಿಯಲ್ಲಿ ಇಂದಿಗೂ ಪಾಳೆಗಾರರು ಎಣ್ಣೆ ತಂದು ಹಾಕಿ ದೀಪೋತ್ಸವ ಆಚರಿಸುತ್ತಿದ್ದಾರೆ. ಇದು ಜಾತ್ಯತೀತದ ಸಂಕೇತವಾಗಿದೆ. ಪಂಚಮಚಾರ್ಯರಲ್ಲಿ ಸಹ ಆರ್ಥಿಕವಾಗಿ ಹಿಂದುಳಿದ ಬಡವರಿದ್ದಾರೆ. ಸರ್ಕಾರ ಅವರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕು ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಕೆ.ಬಿ. ಶ್ರೀನಿವಾಸ್ ರೆಡ್ಡಿ ಮಾತನಾಡಿ, ವೀರಶೈವ ಲಿಂಗಾಯತ ಧರ್ಮದಲ್ಲಿನ ಒಳಜಾತಿಗಳು ಒಂದಾಗಿ ಸಾಗಬೇಕಾಗಿದೆ. ಆಗ ಮಾತ್ರ ಬಹುಸಂಖ್ಯಾತರಾಗಿ ಉಳಿಯಲು ಸಾಧ್ಯ. ಮಠಾಧೀಶರು ಮಠಗಳಲ್ಲಿ ತ್ರಿದಾಸೋಹ ನೀಡಿ ಸಮಾಜಕ್ಕೆ ಉತ್ತಮವಾದ ಪ್ರಜೆಗಳನ್ನು ನೀಡುತ್ತಿದ್ದಾರೆ ಎಂದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಮುಖಂಡ ಕೆ.ಪಿ. ಪಾಲಯ್ಯ ಮಾತನಾಡಿ, ಸಮಾಜದ ಹಿರಿಯರ ಆಚಾರ- ವಿಚಾರಗಳನ್ನು ತಿಳಿದು ಸಮಾಜವನ್ನು ಸಂಘಟಿಸಿ ಒಗ್ಗಟ್ಟಾಗಿ ಸಾಗಿದಾಗ ಮಾತ್ರ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಭಾರತವನ್ನು ಭಕ್ತಿಪ್ರಧಾನವಾದ ದೇಶವನ್ನಾಗಿಸಿ ರೇಣುಕಾಚಾರ್ಯರು ಕೇವಲ ಸಮಾಜಕ್ಕಲ್ಲದೆ ಇಡೀ ಮನುಕುಲಕ್ಕೆ ಸಂಸ್ಕೃತಿಯನ್ನು ಸಾರಿದ್ದಾರೆ ಅವರ ಆದರ್ಶವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕಾಗಿದೆ ಎಂದರು.

ಸ್ವಾಗತ ಸಮಿತಿ ಅಧ್ಯಕ್ಷ ಎನ್.ಎಂ. ಲೋಕೇಶ್ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಎಂ.ಜಿ. ಶಶಿಕಲಾ ಮೂರ್ತಿ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ತಾಲೂಕು ಕಚೇರಿಯಲ್ಲಿ ರೇಣುಕಾಚಾರ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ವಿವಿಧ ಕಲಾ ತಂಡಗಳೊಂದಿಗೆ ವೀರಶೈವ ಕಲ್ಯಾಣ ಮಂಟಪದ ವೇದಿಕೆಯವರೆಗೂ ಮೆರವಣಿಗೆ ಸಾಗಿತು.

ಮುಸ್ಟೂರು ಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿ, ಪಪಂ ಅಧ್ಯಕ್ಷ ನವೀನ್​ಕುಮಾರ್, ಜಂಗಮ ಸಮಾಜದ ತಾಲೂಕು ಅಧ್ಯಕ್ಷ ದೇವಿಕೆರೆ ಶಿವಕುಮಾರಸ್ವಾಮಿ, ಡಾ. ರವಿಕುಮಾರ್, ಜಿಪಂ ಮಾಜಿ ಸದಸ್ಯ ಎಸ್.ಕೆ. ಮಂಜುನಾಥ್, ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಆರ್.ಟಿ. ಪ್ರಶಾಂತ್ ದುಗ್ಗವಟಿಮಠ್, ಹಾಲಸ್ವಾಮಿ ಕಂಬಾಳಿ ಮಠ್ ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net