

ತುಮಕೂರು : ಸಿದ್ಧಗಂಗಾ ಮಠದಲ್ಲಿ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ 15 ದಿನ ನಡೆಯುವ ‘ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ’ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಮಠದ ವಸ್ತು ಪ್ರದರ್ಶನದ ಆವರಣದಲ್ಲಿ ‘ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ’ಕ್ಕೆ ಚಾಲನೆ ನೀಡಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಅನ್ನದಾತರು ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳುವ ಜತೆಗೆ ಸ್ವಾವಲಂಬಿಯಾಗಬೇಕು, ಈ ನಿಟ್ಟಿನಲ್ಲಿ ಕೃಷಿಯಲ್ಲಿ ಆಧುನಿಕ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ, ನೀರಾವರಿ ಸೌಲಭ್ಯಗಳು ಇಲ್ಲದ ಕಾರಣ ಸಂಕಷ್ಟದ ಸುಳಿಗೆ ಸಿಲುಕುತ್ತಾನೆ. ಕೃಷಿಯನ್ನು ಲಾಭದಾಯವಾಗಿಸಿಕೊಳ್ಳಲು ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು ಎಂದರು.
ರೈತರು ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕಿದೆ. ಈ ದೂರದೃಷ್ಟಿ ಇಟ್ಟುಕೊಂಡು ಡಾ.ಶಿವಕುಮಾರ ಸ್ವಾಮೀಜಿ ಅವರು ಆರಂಭಿಸಿದ್ದ ವಸ್ತು ಪ್ರದರ್ಶನದ ಉಪಯೋಗವನ್ನು ರೈತರು ಪಡೆಯಬೇಕು ಎಂದರು.
ದೇಶದ ಅಭಿವೃದ್ಧಿಗೆ ಅನುಕೂಲವಾಗುವ ಸಾಕಷ್ಟು ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡಿದ್ದು ಈ ಕಾರ್ಯಕ್ರಮಗಳ ಪ್ರಚಾರವಾಗಬೇಕು ಎಂದರು. ಡಾ.ಶಿವಕುಮಾರ ಸ್ವಾಮೀಜಿ ಅವರ ದೂರದೃಷ್ಟಿಯ ಫಲವಾಗಿ 1964ರಲ್ಲಿ ಆರಂಭವಾದ ಪ್ರದರ್ಶನ ರೈತಸ್ನೇಹಿಯಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೇಯರ್ ಬಿ.ಜಿ.ಕೃಷ್ಣಪ್ಪ, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿ ಕಾರ್ಯದರ್ಶಿ ಪ್ರೊ.ಬಿ.ಗಂಗಾಧರಯ್ಯ, ಜಂಟಿ ಕಾರ್ಯದರ್ಶಿ ಎಸ್.ಶಿವಕುಮಾರ್, ಕೆ.ಬಿ.ರೇಣುಕಯ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕ ಕೆ.ಎಸ್.ಉಮಾಮಹೇಶ್ ಮತ್ತಿತರು ಇದ್ದರು.
160ಕ್ಕೂ ಹೆಚ್ಚು ಮಳಿಗೆ : ವಸ್ತು ಪ್ರದರ್ಶನ ಪ್ರಾರಂಭೋತ್ಸವದ ಅಂಗವಾಗಿ ಶ್ರೀ ನಾಗಾರ್ಜುನ ಕಲಾ ಸಂಘದ ವತಿಯಿಂದ ಶುಕ್ರವಾರ ಸಂಜೆ ‘ಮೂರೂವರೆ ವಜ್ರಗಳು’ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು. ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ 160ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ 25ಕ್ಕೂ ಹೆಚ್ಚು ಇಲಾಖೆಗಳು, ಖಾಸಗಿ ಹಾಗೂ ಇತರ ಮಳಿಗೆಗಳು ವಸ್ತು ಪ್ರದರ್ಶನದಲ್ಲಿ ಇರಲಿವೆ.