

ತುಮಕೂರು: ತ್ರಿವಿಧ ದಾಸೋಹದ ಸಿದ್ದಗಂಗಾ ಮಠವು ಬಡಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟಿದ್ದು ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗಲಿರುವ ವಿದ್ಯಾರ್ಥಿನಿಲಯದ ಕಟ್ಟಡದ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಸಿದ್ದಗಂಗಾ ಮಠದ ಆವರಣದಲ್ಲಿ 9 ಕೋಟಿ 90 ಲಕ್ಷ ರೂ. ವೆಚ್ಚದ ವಿದ್ಯಾರ್ಥಿನಿಲಯ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶ್ರೀಗಳು, ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ 9.90 ಕೋಟಿ ರೂ., ಅನುದಾನವನ್ನು ಸರ್ಕಾರ ನೀಡಿದೆ. ಎಲ್ಲಾ ವರ್ಗ, ಜಾತಿ, ಧರ್ಮದ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಇದರಿಂದ ಮತ್ತಷ್ಟು ಅನುಕೂಲವಾದಂತಾಗಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಶಾಸಕ ಬಿ.ಸುರೇಶಗೌಡ, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೈದಾಳ ಗ್ರಾಪಂ ಅಧ್ಯಕ್ಷೆ ಮಾಲಾ ಮಂಜುನಾಥ್, ಜಿಪಂ ಮಾಜಿ ಸದಸ್ಯ ಜಿ.ಎಸ್. ಶಿವಕುಮಾರ್, ಭವಿಷ್ಯ ಬಿಲ್ಡ್ ಕಾರ್ಕ್ನ ಶ್ರೀನಿವಾಸ್, ಹೊನ್ನೇಶಕುಮಾರ್ ಮತ್ತಿತರರು ಉಪಸ್ಥಿತರಿದ್ದರು.