ಸಿದ್ಧಗಂಗಾ ಮಠದಿಂದ ಮಕ್ಕಳಿಗೆ ಸಂಸ್ಕಾರಯುಕ್ತ ಶಿಕ್ಷಣ

ಬಾಳ್ಳುಪೇಟೆ ಗ್ರಾಮದಲ್ಲಿ ಸ್ನೇಹಬಳಗ ವತಿಯಿಂದ ಆಯೋಜಿಸಿದ್ದ ಶ್ರೀ ಶಿವಕುಮಾರ ಶ್ರೀಗಳ ಆರನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ದೊಡ್ಡಣ್ಣ, ಮಹಾಂತ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ,  ಶ್ರೀ ವಿಜಯಕುಮಾರ ಸ್ವಾಮೀಜಿ,  ಶ್ರೀ ಧರ್ಮರಾಜೇಂದ್ರ ಸ್ವಾಮೀಜಿ,  ಶ್ರೀ ಸದಾಶಿವ ಸ್ವಾಮೀಜಿ, ಸ್ನೇಹಬಳಗದ ಅಧ್ಯಕ್ಷ ಶಿವಕುಮಾರ್ ಇದ್ದರು.
ಬಾಳ್ಳುಪೇಟೆ ಗ್ರಾಮದಲ್ಲಿ ಸ್ನೇಹಬಳಗ ವತಿಯಿಂದ ಆಯೋಜಿಸಿದ್ದ ಶ್ರೀ ಶಿವಕುಮಾರ ಶ್ರೀಗಳ ಆರನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ದೊಡ್ಡಣ್ಣ, ಮಹಾಂತ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ವಿಜಯಕುಮಾರ ಸ್ವಾಮೀಜಿ, ಶ್ರೀ ಧರ್ಮರಾಜೇಂದ್ರ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಸ್ನೇಹಬಳಗದ ಅಧ್ಯಕ್ಷ ಶಿವಕುಮಾರ್ ಇದ್ದರು.
Published on

ಸಕಲೇಶಪುರ: ಜಾತಿ, ಮತ ಎನ್ನದೆ ಸಿದ್ಧಗಂಗಾ ಮಠ ಮಕ್ಕಳಿಗೆ ಸಂಸ್ಕಾರಯುಕ್ತ ಶಿಕ್ಷಣ ನೀಡುತ್ತಿದೆ ಎಂದು ಚಲನಚಿತ್ರ ನಟ ದೊಡ್ಡಣ್ಣ ಹೇಳಿದರು.

ತಾಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ಸ್ನೇಹಬಳಗ ವತಿಯಿಂದ ಆಯೋಜಿಸಿದ್ದ ಶ್ರೀ ಶಿವಕುಮಾರ ಶ್ರೀಗಳ ಆರನೇ ವರ್ಷದ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರು. ಕಂದಾಚಾರಗಳ ವಿರುದ್ಧ ಹೋರಾಟ ಮಾಡಿದ ಬಸವಣ್ಣನವರ ಆತ್ಮ ನೆಲೆಸಿದ್ದರೆ ಅದು ಸಿದ್ಧಗಂಗೆಯಲ್ಲಿ ಮಾತ್ರ ಎಂದರು.

ಮಠದಲ್ಲಿ ಬಡ ಮಕ್ಕಳು ಮಾತ್ರ ವಿದ್ಯಾಭ್ಯಾಸ ಮಾಡುತ್ತಾರೆಂಬ ನಂಬಿಕೆ ಸುಳ್ಳು. ಇಲ್ಲಿ ಶ್ರೀಮಂತರೂ ಅಧ್ಯಯನ ಮಾಡುತ್ತಾರೆ. ಮಲೆನಾಡಿನಲ್ಲಿ ಧರ್ಮಸಂಸ್ಕಾರ ಅವನತಿಯತ್ತ ಸಾಗುತ್ತಿದ್ದು, ನಾವು ಹೇಳಿಕೊಟ್ಟಿದ್ದನ್ನು ಮಕ್ಕಳು ಕಲಿಯುವುದರಿಂದ ನಮ್ಮ ಧರ್ಮದ ಬಗ್ಗೆ ಹೆಮ್ಮೆ ಇರಬೇಕು ಎಂದು ಸಲಹೆ ನೀಡಿದರು.

ಮಹಿಳೆಯರು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ರಾಯಭಾರಿಗಳು. ಸಮಾಜಕ್ಕೆ ಏನನ್ನು ನೀಡದ ವ್ಯಕ್ತಿ ಬದುಕಿರುವುದು ವ್ಯರ್ಥ. ಕನ್ನಡದಲ್ಲಿ ಒಂದು ವಾಕ್ಯಕ್ಕೆ 10 ರಿಂದ 24 ಪರ್ಯಾಯ ವಾಕ್ಯಗಳಿದ್ದು, ಪ್ರಪಂಚದ ಅತ್ಯಂತ ಶ್ರೀಮಂತ ಭಾಷೆಯಾಗಿದೆ ಎಂದರು.

ಇದೇ ಸಂರ್ಧಭದಲ್ಲಿ ಬಾಳ್ಳುಪೇಟೆ ಸ್ನೇಹ ಬಳಗ ವತಿಯಿಂದ ದಂತ, ನೇತ್ರ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಸಾವಿರಾರು ಜನರು ಶಿಬಿರದ ಪ್ರಯೋಜನ ಪಡೆದರು. ಬಳಿಕ ಅನ್ನದಾಸೋಹ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮೀಜಿ, ತಣ್ಣೀರಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಸಂಕಲಾಪುರ ಮಠದ ಶ್ರೀ ಧರ್ಮರಾಜೇಂದ್ರ ಸ್ವಾಮೀಜಿ, ವಿಜಿಪುರದ ಶ್ರೀ ಸದಾಶಿವ ಸ್ವಾಮೀಜಿ, ಸ್ನೇಹಬಳಗದ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸಂಸ್ಮರಣೆಯಿಂದ ಬಾಳು ಬೆಳಗಲಿದೆ ಎಂದು ಸಿದ್ಧಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಶಿವಕುಮಾರ ಶ್ರೀಗಳ ಆರನೇ ವರ್ಷದ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ತ್ಯಾಗ ಹಾಗೂ ಸೇವೆಗಳ ಗುಣದಿಂದಾಗಿ ಶ್ರೀಗಳು ಮಹಾತ್ಮರ ಸ್ಥಾನ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.

ಪ್ರಸ್ತುತ ಸಮಾಜದಲ್ಲಿ ತ್ಯಾಗ, ಸೇವೆಯ ಕೊರತೆ ಎದ್ದು ಕಾಣುತಿದೆ. ಇದಕ್ಕೆಲ್ಲ ಮುಖ್ಯ ಕಾರಣ ಸಂಸ್ಕಾರದ ಕೊರತೆ. ಮಕ್ಕಳಲ್ಲಿ ಕಟ್ಟುನಿಟ್ಟಾಗಿ ಸಂಸ್ಕಾರ ಕಲಿಸಲೇಬೇಕು. ಇದರಿಂದ ಮಾತ್ರ ಬದುಕಿನಲ್ಲಿ ಉನ್ನತವಾದುದ್ದನ್ನು ಸಾಧಿಸಲು ಸಾಧ್ಯ ಎಂದರು.

ಶ್ರೀ ಶಿವಕುಮಾರ ಶ್ರೀಗಳ ತ್ಯಾಗ ಅನನ್ಯ. ಶ್ರೀಗಳ ಜೀವನ ಅರಿತು ಬದುಕಿದಾಗ ಮಾತ್ರ ಬದುಕು ಪಾವನಗೊಳ್ಳಲಿದೆ. ಬದುಕಿನಲ್ಲಿ ಉತ್ಸಹ ಅತ್ಯಗತ್ಯವಗಿದ್ದು, ಉತ್ಸಾಹಿಗಳಿಂದ ಮಾತ್ರ ಸಾಧನೆ ಸಾಧ್ಯ ಎಂದರು.

ಮಲೆನಾಡು-ಸಿದ್ಧಗಂಗಾ ಮಠದ ಬಾಂಧವ್ಯ ತಾಯಿ ಮಕ್ಕಳಂತಹದ್ದು. ಮಠ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ವೇಳೆ ನೆರವಿಗೆ ಬಂದವರು ಮಲೆನಾಡಿನ ಭಕ್ತರು. ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವನ್ನು ನಮ್ಮ ಶಾಲೆಗಳು ನೀಡುತ್ತಿವೆ. ವರ್ಗರಹಿತ ಸಮಾಜ ನಿರ್ಮಾಣದ ಕನಸನ್ನು ಶ್ರೀಗಳು ಹೊಂದಿದ್ದು ಈ ನಿಟ್ಟಿನಲ್ಲಿ ಮಠ ನಡೆಯುತ್ತಿದೆ ಎಂದರು.

ಮಲೆನಾಡಿಗರ ಬದುಕಿಗೆ ಉರುಳಾಗಿರುವ ಕಾಡಾನೆ ಸಮಸ್ಯೆಯನ್ನು ಸರ್ಕಾರ ಬಗೆಹರಿಸಬೇಕು. ಇಲ್ಲಿನ ಎಲ್ಲ ಕಾಡಾನೆಗಳನ್ನು ಸಂಪೂರ್ಣ ಸ್ಥಳಾಂತರಿಸುವ ಮೂಲಕ ಮಲೆನಾಡಿಗರಿಗೆ ನೆಮ್ಮದಿ ಕಲ್ಪಿಸ ಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net