ಸಿದ್ಧಗಂಗಾ ಮಠದಲ್ಲಿ ಮಹತ್ವದ ನಿರ್ಧಾರ ಘೋಷಿಸಿದ ಸಿಎಂ ಯಡಿಯೂರಪ್ಪ

bsy
Published on

ತುಮಕೂರು: ಶಿವಕುಮಾರ ಶ್ರೀಗಳ ಅಂತರಂಗದ ಶಿಷ್ಯ ಬಿಎಸ್​ವೈ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳ ದ್ವಿತೀಯ ಪುಣ್ಯಸಂಸ್ಮರಣೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನರವ ಮುಖ ನೋಡಿದರೆ ಶಿವಕುಮಾರ ಶ್ರೀಗಳ ಮುಖ ಅರಳುತ್ತಿತ್ತು ಎಂದು ಸ್ಮರಿಸಿದರು.

ಇನ್ನು ಪುಣ್ಯಸಂಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಅನ್ನದಾಸೋಹದ ಜತೆಗೆ ಅಕ್ಷರ ಕಲಿಸಿದ ಸಿದ್ಧಗಂಗಾಶ್ರೀಗಳು ಪ್ರಾತಃಸ್ಮರಣೀಯ. ನಡೆದಾಡುವ ದೇವರ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲು ಸರ್ಕಾರ ಆದೇಶ ಹೊರಡಿಸಲಿದೆ ಎಂದು ಘೋಷಿಸಿದರು. ಇದನ್ನೂ ಓದಿರಿ ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ ದ್ವಿತೀಯ ವರ್ಷದ ಪುಣ್ಯಸ್ಮರಣೆ

ಶಿವಕುಮಾರ ಶ್ರೀಗಳ ಬದುಕು, ಸಾಧನೆ ಸಾರುವ ಉದ್ದೇಶದಿಂದ ಪೂಜ್ಯರ ಹುಟ್ಟೂರಿನಲ್ಲಿ 111 ಅಡಿ ಪುತ್ಥಳಿ, ಗ್ರಾಮದ ಅಭಿವೃದ್ಧಿಗೆ 25 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ವೀರಾಪುರ ಗ್ರಾಮ ತೀರ್ಥಕ್ಷೇತ್ರ ಆಗಬೇಕು ಎಂದು ಸಿಎಂ ತಿಳಿಸಿದರು.

ಸಿದ್ಧಗಂಗಾ ಶ್ರೀಗಳ ಹುಟ್ಟೂರಾದ ರಾಮನಗರ ಜಿಲ್ಲೆ ಮಾಗಡಿ ತಾಲೂಕು ವೀರಾಪುರದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀಗಳ 111 ಅಡಿ ಪುತ್ಥಳಿ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಯ ನೀಲನಕ್ಷೆಯ 3ಡಿ ಯನ್ನು ಸಿಎಂ ಯಡಿಯೂರಪ್ಪ ಬಿಡುಗಡೆಗೊಳಿಸಿದರು. ಇದನ್ನೂ ಓದಿರಿ ಖಾತೆ ಬದಲಾವಣೆ ಸುಳಿವು: ಸಚಿವರ ಅಸಮಾಧಾನ, ಮಾಧುಸ್ವಾಮಿ ರಾಜೀನಾಮೆ?

ಇದಕ್ಕೂ ಮುನ್ನ ಮಾತನಾಡಿದ ಹರಿಹರ ಪಂಚಸಾಲಿ ಗುರುಪೀಠ ವಚನಾನಂದ ಶ್ರೀಗಳು, ನಾಡಿನ‌ ಲಕ್ಷಾಂತರ ಜನರ ಆರಾಧ್ಯದೈವ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ದಿನವನ್ನು ದಾಸೋಹದಿನವನ್ನಾಗಿ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.

ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು, ದೇಗುಲಮಠದ ಶ್ರೀಗಳು, ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ, ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್, ವೀರಶೈವ ಅಭಿವೃದ್ಧಿ ನಿಗಮದ ಬಿ.ಎಸ್.ಪರಮಶಿವಯ್ಯ, ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net