

ತುಮಕೂರು ; ಜಿಲ್ಲೆಯ ಪ್ರವಾಸಿತಾಣ ಎನಿಸಿರುವ ನಾಮದಚಿಲುಮೆಯ ‘ಸಿದ್ಧ ಸಂಜೀವಿನಿ ಔಷಧ ಸಸ್ಯವನ’ ನಿರ್ವಹಣೆಯಿಲ್ಲದೆ ಹಾಳಾಗಿದ್ದು, ಆಕರ್ಷಣೆ ಕಳೆದುಕೊಂಡಿದೆ. ಸ್ಥಳ ಪುರಾಣದ ಮಹತ್ವವಿರುವ ನಾಮದಚಿಲುಮೆ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಉದ್ಯಾನವನ ಸಂಪೂರ್ಣ ಹಾಳಾಗಿದ್ದರೂ ಅರಣ್ಯ ಇಲಾಖೆ ಮೌನವಹಿಸಿದೆ.
ತುಮಕೂರಿನಿಂದ 8 ಕಿಮೀ ದೂರದಲ್ಲಿ ದಟ್ಟಾರಣ್ಯಕ್ಕೆ ಪ್ರತಿನಿತ್ಯ ನೂರಾರು ವಿಹಾರಿಗಳು ಹಾಗೂ ವಾರಾಂತ್ಯದಲ್ಲಿ ಪ್ರವಾಸಿಗರ ದೊಡ್ಡ ದಂಡೇ ಸೇರುತ್ತದೆ. ಸದಾ ಕಾಲ ಹರಿಯುವ ನೀರು, ಜಿಂಕೆ ವನ ನಾಮದಚಿಲುಮೆ ಪ್ರಮುಖ ಆಕರ್ಷಣೆಯಾಗಿವೆ, ಇದರ ಜತೆಗೆ ಸಿದ್ಧ ಸಂಜೀವಿನಿ ಔಷಧ ಸಸ್ಯವನ ಕೂಡ ಪ್ರಮುಖ ಆಕರ್ಷಣೆಯಾಗಿತ್ತು, ಇತ್ತೀಚಿನ ದಿನದಲ್ಲಿ ವನದ ನಿರ್ವಹಣೆ ಸಂಪೂರ್ಣ ನಿಂತು ಹೋಗಿದೆ.
ಮುರಿದು ಬಿದ್ದಿದೆ ಧ್ಯಾನ ಮಂದಿರ: ಅರಣ್ಯದ ನಡುವೆ ವಿಹಾರಿಗಳು, ಧ್ಯಾನಾಸಕ್ತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನಿರ್ಮಿಸಿದ್ದ ಸಸ್ಯವನ ಹಾಳುಬಿದ್ದಿದ್ದು, ಕಟ್ಟಡವೂ ರಕ್ಷಣೆ ಬಯಸುತ್ತಿದೆ. ಪಿರಮಿಡ್ ಮಾದರಿಯಲ್ಲಿರುವ ಧ್ಯಾನಮಂದಿರದ ಹೆಂಚುಗಳು ಬೀಳಲಾರಂಭಿಸಿವೆ. ಬಾಗಿಲಿಗೆ ಬೀಗ ಜಡಿಯಲಾಗಿದ್ದು ಜನರಿಗೆ ಉಪಯೋಗಕ್ಕಿಲ್ಲ. ಮಕ್ಕಳ ಆಟಿಕೆ ಮೇಲೆ ಹಬ್ಬಿದ ಬಳ್ಳಿ: ಸಸ್ಯವನದಲ್ಲಿ ಜನರನ್ನು ಆಕರ್ಷಿಸಲು ಮಕ್ಕಳ ಆಟಕ್ಕೂ ಸಲಕರಣೆಗಳನ್ನು ಅಳವಡಿಸಲಾಗಿದೆಯಾದರೂ ಬಳ್ಳಿಗಳು ಹಬ್ಬಿವೆ. ಸಸ್ಯವನ ಹಾಗೂ ಮಧುವನದಲ್ಲಿರುವ ಮಕ್ಕಳ ಆಟಿಕೆಗಳನ್ನು ಸರಿಪಡಿಸಬೇಕಿದೆ, ಆ ಮೂಲಕ ಕುಟುಂಬ ಸದಸ್ಯರೆಲ್ಲಾ ಸಸ್ಯವನ ವೀಕ್ಷಿಸಿ, ಕಾಲಕಳೆಯಲು ಸೂಕ್ತ ಜಾಗ ಎನಿಸಿದ್ದು ಪ್ರವಾಸೋದ್ಯಮದ ಉತ್ತೇಜನಕ್ಕೆ ಸಸ್ಯವನ ಅಭಿವೃದ್ಧಿ ಮಾಡಲೇಬೇಕಿದೆ.
ಔಷಧೀಯ ವನವೇ ಇಲ್ಲ! ; ನಾಮದಚಿಲುಮೆ ಹೆಬ್ಬಾಗಿಲಿಗೆ ಎದುರಾಗಿಯೇ ‘ಸಿದ್ಧ ಸಂಜೀವಿನಿ ಔಷಧ ಸಸ್ಯವನ’ ಎಂಬ ನಾಮಫಲಕವಿದೆಯಾದರೂ ಒಳಗೆ ಪ್ರವೇಶಿಸಿದರೆ ಯಾವುದೇ ಸಸ್ಯಗಳು ಕಾಣಿಸುವುದಿಲ್ಲ. ಆದರೆ, ಸಸ್ಯವನದ ಪಳೆಯುಳಿಕೆಯಂತೆ ಬಣ್ಣ ಕಳೆದುಕೊಂಡಿರುವ ಬೋರ್ಡ್‌ಗಳು ನೆಲಕ್ಕುರುಳಿವೆ. ಮಕ್ಕಳ ಕೆಮ್ಮು, ನೆಗಡಿ, ಜ್ವರಕ್ಕೆ ರಾಮಬಾಣ ಎಂದು ಬೋರ್ಡ್ ಕಾಣಿಸುತ್ತಿದೆಯಾದರೂ ಸಸ್ಯಗಳಿಲ್ಲ, ಕಳೆ ನಿಯಂತ್ರಣಕ್ಕೆ ಇಡೀ ವನವನ್ನು ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡಲಾಗಿದ್ದು, ಇದ್ದ ಸಸ್ಯಗಳು ಮಣ್ಣಾಗಿವೆ. ವನದಲ್ಲಿ ಸಸ್ಯಗಳೇ ಇಲ್ಲದಿದ್ದರೂ ಸಸ್ಯವನದ ದ್ವಾರ ಬಾಗಿಲು ನಿರ್ಮಾಣ ಇತ್ತೀಚೆಗಷ್ಟೇ ಆಗಿದೆ. ಲಕ್ಷಾಂತರ ರೂ. ವೆಚ್ಚದಲ್ಲಿ ಕಾಂಕ್ರೀಟ್ ದ್ವಾರ ಹಾಗೂ ರಸ್ತೆ ನಿರ್ಮಿಸಲು ಸಾಧ್ಯವಾಗಿದೆಯಾದರೂ ಔಷಧೀಯ ಸಸ್ಯ ಬೆಳೆಸಲು ಸಾಧ್ಯವಾಗಿಲ್ಲ ಏಕೆ ಎಂಬುದು ಪ್ರಕೃತಿ ಪ್ರಿಯರ ಪ್ರಶ್ನೆ.
2012ರಲ್ಲಿ ಆರಂಭವಾಗಿದ್ದ ಸಸ್ಯವನ ; ಪರಿಸರ ಪ್ರಿಯ ಅಧಿಕಾರಿ ಗಾ.ನಂ.ಶ್ರೀಕಂಠಯ್ಯ ಅವರು ತುಮಕೂರು ಜಿಲ್ಲಾ ಅರಣ್ಯಾಧಿಕಾರಿಯಾಗಿದ್ದಾಗ ಈ ಬಹುಪಯೋಗಿ ಸಸ್ಯವನ ಆರಂಭಿಸಲಾಗಿತ್ತು, ‘ಹಸಿರು ಆರೋಗ್ಯ, ಹಸಿರು ಪರಿಸರ’ ಎಂಬ ಧ್ಯೇಯವಾಕ್ಯದಡಿ ಆರಂಭಿಸಿದ್ದ ಸಸ್ಯವನ ಆ ನಂತರ ಬಂದ ಅಧಿಕಾರಿಗಳ ನಿರುತ್ಸಾಹದಿಂದ ಹಾಳಾಗಿದೆ. ಮಕ್ಕಳಿಗೆ ಔಷಧೀಯ ಸಸ್ಯಗಳ ಬಗ್ಗೆ ಪರಿಚಯದ ಜತೆಗೆ ಜಿಲ್ಲೆಯೆಲ್ಲೆಡೆ ಇರುವ ಪಾರಂಪರಿಕ ವೈದ್ಯರನ್ನು ಕರೆಸಿ ಕುಟೀರದಲ್ಲಿ ಉಪನ್ಯಾಸ ಕೂಡ ನಡೆಯುತ್ತಿತ್ತು ಎಂಬುದೀಗ ಇತಿಹಾಸ. ಪ್ರಸ್ತುತ ಉಪನ್ಯಾಸ ಕುಟೀರ, ಧ್ಯಾನಕ್ಕಿದ್ದ ಪಿರಮಿಡ್ ಕೂಡ ಅವಸಾನದೆಡೆಗೆ ಸಾಗಿವೆ.
ತುಮಕೂರು ಜಿಲ್ಲೆಯಲ್ಲಿ ನೂರಾರು ಜನರು ಪಾರಂಪರಿಕ ಔಷಧೀಯ ತಜ್ಞರಿದ್ದು ಅವರ ಜ್ಞಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಈ ಸಸ್ಯವನದಲ್ಲಿ ಆಗಬೇಕಿತ್ತು. ರಾಜ್ಯದಲ್ಲಿಯೇ ದೊಡ್ಡ ಆಸ್ತಿಯಾಗಬಹುದಾದ ಔಷಧೀಯ ಸಸ್ಯವನ ಅರಣ್ಯ ಇಲಾಖೆ ನಿರಾಸಕ್ತಿಯಿಂದ ಅವಸಾನದೆಡೆಗೆ ಸಾಗಿದೆ. ಸಮಾನ ಮನಸ್ಕ ಇಲಾಖೆಗಳು ಪರಸ್ಪರ ಸಹಕಾರದಲ್ಲಿ ಈ ಕೇಂದ್ರದ ಧ್ಯೇಯ ಸಾಧನೆಗೆ ಶ್ರಮಿಸಬೇಕು. ಸುಬ್ಬಣ್ಣ, ವನ್ಯಜೀವಿ ಛಾಯಾಗ್ರಾಹಕ ನಾಮದಚಿಲುಮೆ ಸಿದ್ಧ ಸಂಜೀವಿನಿ ಔಷಧ ಸಸ್ಯವನ ಸಂಪೂರ್ಣ ಹಾಳಾಗಿರುವುದು ಇಲಾಖೆ ಗಮನದಲ್ಲಿದೆ. ಟಿಕೆಟ್‌ನಿಂದ ಸಂಗ್ರಹವಾಗಿರುವ ಹಣದಲ್ಲಿ ಪುನಶ್ಚೇತನಕ್ಕೆ ಕ್ರಮಕೈಗೊಳ್ಳಲಾಗಿದೆ. ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ನಡೆಸಲಾಗುವುದು. ರಮೇಶ್, ಡಿಎಫ್‌ಒ, ತುಮಕೂರು