

ತುಮಕೂರು: ಕರೊನಾ ಸೋಂಕು ಹರಡದಂತೆ ದೇಶವ್ಯಾಪಿ ಲಾಕ್‌ಡೌನ್ ಜಾರಿಗೊಳಿಸಿದ್ದಾಗ ಬಹುತೇಕ ಎರಡೂವರೆ ತಿಂಗಳು ಎಲ್ಲ ಚಟುವಟಿಕೆಗಳು ಸ್ತಬ್ಧಗೊಂಡಿತ್ತು. ಆದರೆ ಈ ವೇಳೆಯಲ್ಲಿಯೇ ಸದ್ದುಗದ್ದಲವಿಲ್ಲದೆ ಕಲ್ಯಾಣಿ, ಬಾವಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಸಿದ್ಧಗಂಗಾ ಮಠ ಜಲಕ್ರಾಂತಿಗೆ ಮುನ್ನುಡಿ ಬಂದಿದೆ.
ಲಾಕ್ ಡೌನ್ ವೇಳೆ ಮಠಕ್ಕೆ ಭಕ್ತರಿಗೆ, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಮಠದ ಮಕ್ಕಳು ಸಹ ಮನೆಗಳಿಗೆ ಹಿಂದಿರುಗಿಸಲು ಆರಂಭಿಸಿದರು. ನೋಡನೋಡುತ್ತಿದ್ದಂತೆ 10ಸಾವಿರಕ್ಕೂ ಹೆಚ್ಚಿದ್ದ ಮಠದ ಮಕ್ಕಳ ಸಂಖ್ಯೆ 300-400ಕ್ಕೆ ಇಳಿದಿತ್ತು. ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳ ಎಲ್ಲ ಕಾರ್ಯಕ್ರಮಗಳು, ಭಕ್ತರ ಮನೆಗಳಲ್ಲಿನ ಪೂಜೆ ಕೂಡ ರದ್ದಾದವು. ಈ ಸಂದರ್ಭದಲ್ಲಿ ಲಾಕ್‌ಡೌನ್ ಹೊಸ ಕಾಯಕಕ್ಕೆ ನಾಂದಿಹಾಡಿತು. ಮಠದ ಸುತ್ತಮುತ್ತಲಿನ ಬಾವಿ, ಕಲ್ಯಾಣಿ ಸ್ವಚ್ಛಗೊಳಿಸಿ ಬತ್ತಿಹೋಗಿದ್ದ ನೀರಿನ ಸೆಲೆಗಳ ಜಲಮರುಪೂರಣಕ್ಕೆ ಸಂಕಲ್ಪ ಮಾಡಲಾಯಿತು.
ಶ್ರೀಮಠದ ಪ್ರವೇಶದ್ವಾರದಲ್ಲಿರುವ ದೊಡ್ಡ ಕಲ್ಯಾಣಿ ಹೊರತುಪಡಿಸಿ ಸುತ್ತಮುತ್ತಲಿನ 11 ಬಾವಿ, ಕಲ್ಯಾಣಿ ಸ್ವಚ್ಛತಾ ಕಾರ್ಯದ ಸಂಕಲ್ಪ ತೊಟ್ಟ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ಮಠದ ಶಿಕ್ಷಕರು, ಸಿಬ್ಬಂದಿ, ಬೆರಳೆಣಿಕೆ ಮಕ್ಕಳು ಸೇನಾನಿಗಳಂತೆ ಜಲಕ್ರಾಂತಿಗೆ ಇಳಿದೇ ಬಿಟ್ಟರು.
ಕರೊನಾ ನಿಯಂತ್ರಣದ ಮುಂಜಾಗ್ರತಾ ಮಾರ್ಗಸೂಚಿಗಳಂತೆ ಪರಸ್ಪರ ಅಂತರ, ಮಾಸ್ಕ್ ಧರಿಸಿ ಕಲ್ಯಾಣಿ, ಬಾವಿಗಳ
ಸ್ವಚ್ಛತಾ ಕಾರ್ಯದ ಜತೆಗೆ ಜಲಯೋಧರು ಹೂಳೆತ್ತಿದರು. ಬತ್ತಿಹೋಗಿದ್ದ ನೀರಿನ ಸೆಲೆಗಳಲ್ಲಿ ಭೂಮಿ ತೇವಗೊಳ್ಳಲಾರಂಭಿಸಿತು. ನಿಧಾನವಾಗಿ ನೀರು ಜಿನುಗತೊಡಗಿತು. ಕಸ, ಕಡ್ಡಿಗಳಿಂದ ತುಂಬಿಹೋಗಿದ್ದ ಬಾವಿ, ಕಲ್ಯಾಣಿಗಳಿಗೆ ಕಾಯಕಲ್ಪ ನೀಡಲಾಯಿತು. ಗತವೈಭವಕ್ಕೆ ಮುನ್ನುಡಿ ಹಾಡಲಾಯಿತು.
ಶ್ರೀಗಳ ದೂರದೃಷ್ಟಿಯ ಪ್ರತೀಕ: ಲಾಕ್‌ಡೌನ್ ಸಮಯದ ಸದ್ಭಳಕೆ ಜತೆಗೆ ಜಲ ಮರು ಪೂರಣ ಕಾಯಕಕ್ಕೆ ಮುಂದಾಗಿದ್ದ ಸಿದ್ಧಲಿಂಗ ಶ್ರೀಗಳ ಉದ್ದೇಶವು ದೂರದೃಷ್ಟಿಯ ಪ್ರತೀಕವಾಗಿದೆ. 10 ಸಾವಿರಕ್ಕೂ ಹೆಚ್ಚು ಮಕ್ಕಳಿರುವ ಶ್ರೀಮಠದಲ್ಲಿ ನೀರಿನ ಕೊರತೆ ಯಾವಾಗಲೂ ಇದ್ದದ್ದೇ. ಆದರೆ, ಮಳೆ ಬಂದರೆ ಮಠದ ಅಂಗಳದಲ್ಲಿನ ಬಾವಿ, ಕಲ್ಯಾಣಿಗಳು ಮೈದುಂಬಿ, ಅಂತರ್ಜಲ ವೃದ್ಧಿಯಾಗಲಿದೆ. ಕೊಳವೆಬಾವಿಗಳಲ್ಲೂ ನೀರಿನ ಸಮಸ್ಯೆ ಎದುರಾಗುವುದಿಲ್ಲ. ವಾತಾವರಣವು ಕೂಡ ತಂಪಾಗಿರಲಿದೆ. ಸದ್ದಿಲ್ಲದೆ ಮಠದ ಅಂಗಳದಲ್ಲಿ ಜಲಾಂದೋಲನ ಸಾಗಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಸಮಯದ ಸದ್ಭಳಕೆಗೆ ಮಠದ ಎಲ್ಲ ಕಲ್ಯಾಣಿ, ಬಾವಿಗಳನ್ನು ಸ್ವಚ್ಛಗೊಳಿಸುವ ಕಾಯಕ ಕೈಗೆತ್ತಿಕೊಂಡು ಪೂರ್ಣಗೊಳಿಸಿದೆವು. ಅದರ ಪರಿಣಾಮ ಬತ್ತಿದ ಕಲ್ಯಾಣಿ, ಬಾವಿಗಳಲ್ಲಿ ಈಗ ನೀರು ಕಾಣಬಹುದಾಗಿದೆ. ಜಲ ಮರುಪೂರಣಕ್ಕೂ ಪೂರಕವಾಗಿದೆ. ಶ್ರೀ ಸಿದ್ದಲಿಂಗ ಸ್ವಾಮೀಜಿ ಮಠಾಧ್ಯಕ್ಷರು, ಸಿದ್ಧಗಂಗಾಮಠ ಕರೊನಾ ಸಂದರ್ಭದಲ್ಲೂ ಸಿದ್ಧಗಂಗಾ ಮಠ ನಾಡಿಗೆ ಹಲವು ಯೋಜನೆಗಳ ಮೂಲಕ ಮಾರ್ಗದರ್ಶಿ ಎನಿಸಿದೆ. ಕಲ್ಯಾಣಿ, ಬಾವಿಗಳ ಸ್ವಚ್ಛತಾ ಕಾಯಕದ ಹಿಂದಿನ ಸಂಕಲ್ಪ ಶಕ್ತಿ ಸಿದ್ದಲಿಂಗ ಶ್ರೀಗಳು. ಇಂತಹ ದೂರದೃಷ್ಟಿಯ ಕಾರ್ಯ ಯೋಜನೆಗಳು ನಮ್ಮಂಥವರಿಗೆ ಸ್ಫೂರ್ತಿ. ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೊನ್ನಂಗವಿ ಮಠ, ಶಿವಗಂಗೆ