

ಎಚ್.ಡಿ.ಕೋಟೆ: ಸಿಕಲ್ ಸೆಲ್ ಅನೀಮಿಯಾ ರೋಗ ಜನರನ್ನು ಹೆಚ್ಚು ಕಾಡುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಜಯಂತ್ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ಸಿಕಲ್ ಸೆಲ್ ಅನೀಮಿಯಾ ನಿಯಂತ್ರಣ ಜಿಲ್ಲಾ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಂಪು ರಕ್ತ ಕಣ ಕಡಿಮೆ ಆದಾಗ ಸಿಕಲ್ ಸೆಲ್ ರೋಗ ಕಂಡುಬರುತ್ತದೆ. ಇದನ್ನು ಕನ್ನಡದಲ್ಲಿ ಕುಡುಗೋಲು ಕಣ ರೋಗ ಎಂದು ಕರೆಯಲಾಗುತ್ತದೆ. ಇದರ ಪ್ರಮುಖ ಲಕ್ಷಣ ರಕ್ತಹೀನತೆ ಆಗಿರುತ್ತದೆ. ಈ ರೋಗವು ಸರಾಸರಿ ಆಯಸ್ಸು ಕಡಿಮೆ ಮಾಡುತ್ತದೆ. ಇದು ಹೆಚ್ಚಾಗಿ ಅರಣ್ಯ ವಾಸಿಗಳಲ್ಲಿ ಕಂಡುಬರುತ್ತದೆ. ಇದೊಂದು ಅನುವಂಶಿಕ ಕಾಯಿಲೆ ಆಗಿದೆ. ತಾಲೂಕಿನಲ್ಲಿ 73 ಪ್ರಕರಣಗಳು ಇದ್ದು, ಇದನ್ನು ನಿಯಂತ್ರಿಸಲು ಎಲ್ಲರೂ ಪ್ರಯತ್ನಿಸೋಣ ಎಂದರು.
ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ತಾಲೂಕು ಹೆಚ್ಚು ಅರಣ್ಯದಿಂದ ಕೂಡಿದ್ದು, ಸಿಕಲ್ ಸೆಲ್ ರೋಗವನ್ನು ನಿಯಂತ್ರಣ ಮಾಡಲು ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕು. ಜತೆಗೆ ರೋಗ ಇರುವವರನ್ನು ಪತ್ತೆಹಚ್ಚಿ ಅವರಿಗೆ ಚಿಕಿತ್ಸೆ ಕೊಡಿಸಿ ಗುಣಮುಖರಾಗಲು ಸಹಕಾರ ನೀಡೋಣ. ಕೇವಲ ಬುಡಕಟ್ಟು ಜನರಿಗೆ ಮಾತ್ರ ಬರುವುದಿಲ್ಲ. ಸಮುದಾಯದ ಒಳಗೆ ಇರುವರಿಗೂ ಬರುತ್ತದೆ. ಹಾಗಾಗಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಡ್ಡರಗುಡಿ ಚಿಕ್ಕಣ್ಣ ಮಾತನಾಡಿ, ಆದಿವಾಸಿಗಳು ಎಂದರೆ ಶತಾಯುಷಿ ಎಂದು ತಿಳಿದಿದೆ. ಈಗ ಸಿಕಲ್ ಸೆಲ್ ಕಾಯಿಲೆ ಬಂದರೆ ಕೇವಲ 45 ವರ್ಷ ಎಂಬುದು ಭಯದ ವಾತಾವರಣ ಆಗಿದೆ. ಕಾಯಿಲೆ ಬಗ್ಗೆ ಭಯ ಹುಟ್ಟಿಸುವ ಬದಲು ಆರೋಗ್ಯ ಇಲಾಖೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಉತ್ತಮವಾದ ವಾತಾವರಣ ಇದ್ದರೆ ರೋಗ ಬರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಆದಿವಾಸಿಗಳಿಗೆ ವಾಸಿಸಲು ಮನೆಯೇ ಇರುವುದಿಲ್ಲ. ಈಗಾದರೆ ಉತ್ತಮ ವಾತಾವರಣ ಹೇಗೆ ಕಾಣಲು ಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದರು.
ವೈದ್ಯ ಡಾ.ದೀಪ ಭಟ್ ಮಾತನಾಡಿ, ಕಾಯಿಲೆ ಬಗ್ಗೆ ಹೆದರಿಕೊಳ್ಳದೆ ಚಿಕಿತ್ಸೆ ಪಡೆದರೆ ರೋಗದಿಂದ ಮುಕ್ತಿ ಹೊಂದಬಹುದು. ಸಿಕಲ್ ಸೆಲ್ ರೋಗ ಬಂದ ತಕ್ಷಣ ನಮ್ಮ ಆಯಸ್ಸು ಮುಗಿದು ಹೋಯಿತು ಎಂದು ಆತಂಕಪಡಬೇಕಾಗಿಲ್ಲ. ಜಾಗೃತಿ ವಹಿಸಿದರೆ ತಡೆಗಟ್ಟಲು ಸಾಧ್ಯ. ಜಿಲ್ಲೆಯಲ್ಲಿ 1.55 ಲಕ್ಷ ಜನರಿದ್ದು, ಇವರಿಗೆ ಪರೀಕ್ಷೆ ನಡೆಯಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಮಧು ಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಟಿ.ರವಿಕುಮಾರ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಜಿ.ಆರ್.ಮಹೇಶ್, ಆದಿವಾಸಿ ಮುಖಂಡರಾದ ಶೈಲೇಂದ್ರ, ಕಾಳಕಾಲ್ಕರ್, ಅಯ್ಯಪ್ಪ, ರತ್ನಮ್ಮ, ಬಸವರಾಜು, ಮೈಸೂರು ಕೆ.ಆರ್.ಆಸ್ಪತ್ರೆ ಡಾ. ಶ್ರೇಯಸ್, ನಾಗರಾಜು ಇದ್ದರು.