

ಕಲಬುರಗಿ: ಭಾರಿ ಕೋಲಾಹಲವನ್ನೇ ಸೃಷ್ಟಿಸಿರುವ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಿಂಗ್‌ಪಿನ್ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮಂಜುನಾಥ್ ಮೇಳಕುಂದಾನನ್ನು ಸಿಐಡಿ ಪೊಲೀಸರು ಇದಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಒಳ ಉಡುಪಿನಲ್ಲಿ ಬ್ಲೂ ಟೂಥ್ ಇಟ್ಟು ಕಿವಿಯೋಳಗೆ ಚಿಕ್ಕದಾದ ಟ್ರಾನ್ಸ್ಮೀಟರ್ ಕಿವಿಯಲ್ಲಿ ಇಟ್ಟುಕೊಂಡು ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪ ಇವರ ಮೇಲಿದೆ. ಬ್ಲೂ ಟೂಥ್ ಬಳಕ್ಕೆ ಬಗ್ಗೆ ಯಾರಿಗೂ ಅನುಮಾನ ಬಾರದಂತೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸ್ಪೆಷಲ್ ಟ್ರೈನಿಂಗ್ ನೀಡಲಾಗುತ್ತಿತ್ತು. ಪರೀಕ್ಷಾರ್ಥಿ ಒಂದು ಬಾರಿ ಸಣ್ಣದಾಗಿ ಕೆಮ್ಮಿದರೆ ಉತ್ತರ ರಿಸಿವ್ ಎಂದು ಸೂಚನೆಯಾಗಿತ್ತು. ಅದಾದ ಬಳಿಕ ಇನ್ನೊಂದು ಪ್ರಶ್ನೆಯ ಉತ್ತರ ಹೇಳಲಾಗುತ್ತಿತ್ತು. ಪ್ರತಿ ಅಭ್ಯರ್ಥಿಗೆ ಒಂದು ಹೊಸ ಸಿಮ್ ಕಾಡ್೯ ಖರೀದಿಸಿ ನೀಡಲಾಗುತ್ತಿತ್ತು. ಪರೀಕ್ಷೆ ಮುಗಿದ ಬಳಿಕ ಈ ತಂಡ ಅಲ್ಲೇ ಸಿಮ್ ನಾಶ ಮಾಡುತ್ತಿತ್ತು. ಈ ಮೂಲಕ ಪೊಲೀಸರ ಕೈಗೆ ಸಿಕ್ಕರೂ ಕಾಲ್ ಡೆಟೆಕ್ಟ್ ಆಗದಂತೆ ನೋಡಿಕೊಳ್ಳಲಾಗುತ್ತಿತ್ತು.
ಇಂಥ ಖತರ್ನಾಕ್ ಐಡಿಯಾದ ಮೂಲಕ ಅಕ್ರಮ ಎಸಗಿರುವ ಮಂಜುನಾಥ್‌ನ ಇನ್ನೊಂದು ಕರಾಳಮುಖ ಬಯಲಿಗೆ ಬಂದಿದೆ. ಅದೇನೆಂದರೆ, 2021ರ ಡಿಸೆಂಬರ್ 14ರಂದು ಲೋಕೋಪಯೋಗಿ ಇಲಾಖೆಯ 330 ಜೆಇ ಮತ್ತು 660 ಎಇ ಹುದ್ದೆಗಳ ಭರ್ತಿಗೆ ನಡೆದ ಇ ಪರೀಕ್ಷೆಯಲ್ಲಿ ಕೂಡ ಅಕ್ರಮ ಎಸಗಿದ್ದ. ಈ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದ ಈತನನ್ನು ಬಂಧಿಸಲಾಗಿತ್ತು. ಆದರೆ ಈ ವಿಷಯವನ್ನು ಕಚೇರಿಯಲ್ಲಿ ತಿಳಿಸದೇ ತನಗೆ ಅನಾರೋಗ್ಯ ಆಗಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ರಜೆ ಬೇಕು ಎಂದು ಲೀವ್ ಲೆಟರ್ ಬರೆದು ವೈದ್ಯಕೀಯ ರಜೆ ಪಡೆದಿದ್ದ. ಈ ದಿನದಲ್ಲಿ ವೈದ್ಯಕೀಯ ರಜೆ ಎಂದು ಇದ್ದ ಹಿನ್ನೆಲೆಯಲ್ಲಿ ಸಂಬಳ ಕೂಡ ಪಡೆದಿದ್ದ.
ಅಚ್ಚರಿಯ ವಿಷಯ ಎಂದರೆ ಕಲಬುರಗಿಯ ವೈದ್ಯರೊಬ್ಬರು ತಮ್ಮಲ್ಲಿ ಚಿಕಿತ್ಸೆ ಪಡೆರುವ ಬಗ್ಗೆ ಮೆಡಿಕಲ್ ಸರ್ಟಿಫಿಕೇಟ್ ನೀಡಿದ್ದರು ಈ ಸರ್ಟಿಫಿಕೇಟ್ ನೋಡಿ ರಜೆ ಮಂಜೂರು ಮಾಡಲಾಗಿತ್ತು. ಇದರ ಜತೆಗೆ ಈತನ ವಿರುದ್ಧ ಹಲವಾರು ದೂರುಗಳು ಇವೆ. ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ವಿನಾಕಾರಣ ಸತಾಯಿಸಿದ್ದ ಕಾರಣಕ್ಕೆ ಮೇಲಧಿಕಾರಿಗಳು ಈತನಿಗೆ ಕಳೆದ ಫೆಬ್ರವರಿಯಲ್ಲೇ ನೋಟಿಸ್ ಸಹ ನೀಡಿರುವುದು ಬೆಳಕಿಗೆ ಬಂದಿದೆ.