ಆಂತರಿಕ ದೂರು ಸಮಿತಿ ಕಡ್ಡಾಯ: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್

shyamala
Published on

ಉಡುಪಿ: ಮಹಿಳೆಯರು ಕೆಲಸ ಮಾಡುವ ಸಂಸ್ಥೆ, ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ರಚಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದರು.

ಶುಕ್ರವಾರ ನಗರದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 13ಕ್ಕಿಂತ ಅಧಿಕ ಮಹಿಳೆಯರಿರುವ ಸಂಸ್ಥೆಯಲ್ಲಿ ಆಂತರಿಕ ದೂರು ಸಮಿತಿ ರಚಿಸಿ, ಕಾಲಕಾಲಕ್ಕೆ ಸಭೆ ನಡೆಸಿ, ಸಮಸ್ಯೆಗಳಿದ್ದರೆ ಪರಿಹರಿಸುವಂತೆ ಆದೇಶಿಸಲಾಗಿದೆ ಎಂದರು. ಕೋವಿಡ್‌ನಿಂದ ಮೃತಪಟ್ಟ ಕೊರೊನಾ ವಾರಿಯರ್ ಬ್ರಹ್ಮಾವರದ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಕುಟುಂಬಕ್ಕೆ ಪರಿಹಾರ ದೊರಕದೆ ಇರುವ ಕುರಿತು ಮಾಹಿತಿ ಸಿಕ್ಕಿದ್ದು, ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿ ಶೀಘ್ರದಲ್ಲಿ ಕುಟುಂಬಕ್ಕೆ ಪರಿಹಾರ ನೀಡುವಂತೆ ಸೂಚಿಸಲಾಗಿದೆ ಎಂದರು.

ರಕ್ಷಾ ಸಾವಿನ ವರದಿ: ವೈದ್ಯಕೀಯ ನಿರ್ಲಕ್ಷೃದಿಂದ ಮೃತಪಟ್ಟ ಆರೋಪಕ್ಕೆ ಸಂಬಂಧಿಸಿ ರಕ್ಷಾ ಅವರ ಕುಟುಂಬ ರಾಷ್ಟ್ರೀಯ ಮಹಿಳಾ ಆಯೋಗವನ್ನು ಸಂಪರ್ಕಿಸಿದೆ. ಡಿಜಿಪಿಗೆ ಈ ಬಗ್ಗೆ ದೂರು ನೀಡಲಾಗಿದೆ. ಆಸ್ಪತ್ರೆಯಲ್ಲಿ ನಿರ್ಲಕ್ಷೃವಾಗಿದ್ದಲ್ಲಿ ಈ ಬಗ್ಗೆ ವಿವರವನ್ನು ನೀಡುವಂತೆ ಹಾಗೂ ತನಿಖೆ ಶೀಘ್ರ ಮುಗಿಸುವಂತೆ ಸೂಚಿಸಲಾಗಿದ್ದು, ಕೇಂದ್ರ ಆರೋಗ್ಯ ಇಲಾಖೆಗೂ ಈ ಬಗ್ಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಡಿವೈಎಸ್ಪಿ ಜೈಶಂಕರ್, ಮಹಿಳಾ ಠಾಣೆ ಉಪನಿರೀಕ್ಷಕ ಕಿರಣ್, ಉಪನಿರೀಕ್ಷಕಿ ಫೆಮಿನಾ, ಶಿಶುಕಲ್ಯಾಣಾಭಿವೃದ್ಧಿ ಅಧಿಕಾರಿ ವೀಣಾ ಸುದ್ದಿಗೋಷ್ಠಿಯಲ್ಲಿದ್ದರು.

ರಾಜ್ಯದಲ್ಲಿ 360 ಪ್ರಕರಣ

ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ರಾಜ್ಯದಿಂದ 360 ಪ್ರಕರಣಗಳು ದಾಖಲಾಗಿವೆೆ. 337 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. 13 ಪ್ರಕರಣಗಳ ವಿಚಾರಣೆಗೆ ಬಾಕಿ ಇದೆ. 59 ಪ್ರಕರಣಗಳು ಇತ್ಯರ್ಥಗೊಂಡಿವೆ. ಬೆಂಗಳೂರಿನಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ. ಉಡುಪಿಯಲ್ಲಿ 13 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ಪ್ರಕರಣ ದಾಖಲಾಗಿದೆ ಎಂದು ಶ್ಯಾಮಲಾ ಕುಂದರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net