

ತಿ.ನರಸೀಪುರ : ಆದರ್ಶ ರಾಷ್ಟ್ರ ಸೇವಕರಾಗಿ ತಮ್ಮ ಸರ್ವಸ್ವವನ್ನೂ ದೇಶಕ್ಕೆ ಮುಡಿಪಾಗಿಟ್ಟ ಭಾರತೀಯ ಜನಸಂಘದ ಸ್ಥಾಪಕ ಶ್ಯಾಂ ಪ್ರಸಾದ್ ಮುಖರ್ಜಿ ಅವರ ಬದುಕನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಬಿಜೆಪಿ ಗ್ರಾಮಾಂತರ ಮಾಜಿ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಹೇಳಿದರು.
ಪಟ್ಟಣದ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಬಿಜೆಪಿ ವರುಣ ಮಂಡಲದ ವತಿಯಿಂದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಸಂಸ್ಮರಣಾದಿನದ ಅಂಗವಾಗಿ ಭಾನುವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಶ್ಯಾಮ್ ಪ್ರಸಾದ್ ಮುಖರ್ಜಿ ಅಪ್ರತಿಮ ದೇಶಪ್ರೇಮಿ. ಕಾಶ್ಮೀರದ 370ನೇ ವಿಧಿ ರದ್ದಿಗೆ ಹೋರಾಟ ಮಾಡಿದ್ದರು. ಕಾಂಗ್ರೆಸ್‌ನಲ್ಲಿದ್ದರೂ ಅವರನ್ನು ಅಂದಿನ ಕಾಂಗ್ರೆಸ್ ನಾಯಕರು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇದರಿಂದ ನೊಂದ ಅವರು ಅಲ್ಲಿಂದ ಹೊರಬಂದು ಜನಸಂಘ ಕಟ್ಟಿದರು ಎಂದರು.
ನೆಹರು ಅವರಿಗೆ ಪರ್ಯಾಯವಾಗಿ ಶ್ಯಾಮ್ ಪ್ರಸಾದ್ ನಾಯಕರಾಗಿ ಹೊರಹೊಮ್ಮಿದ್ದರು. ಭಾರತೀಯ ಅಖಂಡತೆಗೆ ದುಡಿದಿದ್ದ ಅವರು ಬಿಜೆಪಿಗೆ ದಾರಿದೀಪವಾಗಿದ್ದರು. ಅವರ ಆಶಯ ಈಡೇರಿಸಲು ನಾವೆಲ್ಲರೂ ಶ್ರಮಿಸಬೇಕಿದೆ. ಅವರ ಚಿಂತನೆ, ರಾಷ್ಟ್ರೀಯತೆ ಬಗ್ಗೆ ಎಲ್ಲರೂ ಅರಿಯಬೇಕಿದೆ. ಕಾಶ್ಮಿರದಲ್ಲಿನ ಭಯೋತ್ಪಾದನೆ ಭಾರತದ ಸಾರ್ವಭೌಮತ್ವಕ್ಕೆ ಸವಾಲು ಒಡ್ಡಿದೆ. ಈ ಸನ್ನಿವೇಶದಲ್ಲಿ ಶ್ಯಾಮಪ್ರಸಾದ್ ರವರ ಆದರ್ಶಗಳು ಪ್ರಸ್ತುತ ಎಂದವರು ಹೇಳಿದರು.
ಬಹು ಹಿಂದೆಯೇ ಕಾಶ್ಮಿರಕ್ಕೆ ಪ್ರತ್ಯೇಕ ಸಂವಿಧಾನ ಬೇಡ ಎಂದು ಜನ ಸಂಘದ ಸಂಸ್ಥಾಪಕ ಶ್ಯಾಂ ಪ್ರಸಾದ್ ಮುಖರ್ಜಿ ಅವರು ನೀಡಿದ್ದ ಸಲಹೆಯನ್ನು ಕಾಂಗ್ರೆಸ್ ಸರ್ಕಾರ ತಿರಸ್ಕರಿಸಿದ ಫಲವಾಗಿ ಇವತ್ತು ಕಾಶ್ಮಿರ ಭಾರತಕ್ಕೆ ಮಡಿಲಿನ ಕೆಂಡವಾಗಿ, ನಮ್ಮ ಸೈನಿಕರನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂದು ಮಂಗಳಾ ಬೇಸರ ವ್ಯಕ್ತಪಡಿಸಿದರು.
ದೂರದೃಷ್ಟಿಯ ನೇತಾರರಾಗಿದ್ದ ಶ್ಯಾಮ್‌ಪ್ರಸಾದ್ ಅವರು 1951ರಲ್ಲಿ ಪ್ರಧಾನಿ ನೆಹರೂ ಅವರ ಕಾಶ್ಮಿರ ಸ್ವಾಯತ್ತತೆ ವಿಚಾರಗಳಿಗೆ ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರ ಸಂಪುಟದ ಸಚಿವ ಸ್ಥಾನಕ್ಕೆ ರಾಜೀನಾಮೆ ಎಸೆದು ಹೊರಬಂದಿದ್ದರು. ಬಳಿಕ ಜನಸಂಘ ಹುಟ್ಟುಹಾಕಿ, ಕಾಶ್ಮಿರ ವಿಮೋಚನಾ ಚಳವಳಿಯ ನೇತೃತ್ವ ವಹಿಸಿದ್ದರು ಎಂದರು.
ಬಿಜೆಪಿ ವರುಣ ಮಂಡಲ ಅಧ್ಯಕ್ಷ ಹದಿನಾರು ಸತೀಶ್ ಮಾತನಾಡಿ, ಮುಖರ್ಜಿ ಅವರು ಸ್ವಾತಂತ್ರೋತ್ತರದಲ್ಲಿ ಹಿಂದುಗಳ ಮೇಲಿನ ಶೋಷಣೆಯ ವಿರುದ್ಧ ಪ್ರಮುಖ ಧ್ವನಿಯಾಗಿದ್ದರು. ಜನ ಸಂಘ ಪಕ್ಷ ಕಟ್ಟಿ ಜಮ್ಮು-ಕಾಶ್ಮಿರದಲ್ಲಿನ ಹಿಂದುಗಳ ಪರವಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ಮಹಾನ್ ನಾಯಕರಾಗಿದ್ದರು. ಮುಖರ್ಜಿ ಅವರ ಪ್ರತಿ ಕಾರ್ಯದಲ್ಲೂ, ಮಾತಿನಲ್ಲೂ ದೇಶಾಭಿಮಾನ ಎದ್ದು ಕಾಣುತ್ತಿತ್ತು. ದುಷ್ಟ ಶಕ್ತಿಗಳಿಂದ ದೇಶ ವಿಭಜಿಸುವ ಹುನ್ನಾರ ನಡೆದಾಗ ಪ್ರಬಲವಾಗಿ ವಿರೋಧಿಸುತ್ತಾ ಬಂದರು. ದೇಶದ ಏಕತೆ ಅಖಂಡತೆಗೆ ಅವರಿಗಿದ್ದ ಪ್ರೇಮ, ಕಾಳಜಿ, ಪ್ರತಿಯೊಬ್ಬ ಭಾರತೀಯನಿಗೆ ಅವರ ಮೇಲೆ ಅಪಾರ ಗೌರವ ಮೂಡಿಸುತ್ತದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಆಲಗೂಡು ವೆಂಕಟರಮಶೆಟ್ಟಿ, ಬಿದರಗೂಡು ಕುಮಾರ್, ಮಾಜಿ ಅಧ್ಯಕ್ಷ ಎನ್.ಶಿವಯ್ಯ, ಡೇರಿ ಅಧ್ಯಕ್ಷ ಡಿ.ಎಲ್. ಮಹದೇವಪ್ಪ, ಪ್ರಭುಸ್ವಾಮಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮೀ, ಗೀತಾ, ಲೀಲಾವತಿ, ರಾಜೇಶ್ವರಿ, ಹುಳಿಮಾವು ಶಿವು, ತುಂಬಲಾ ಪ್ರಭುಸ್ವಾಮಿ, ಹೋಟೆಲ್ ಕೀರ್ತಿ,ಕೃಷ್ಣ, ನಾಗರಾಜು, ಮಲ್ಲೇಶ್, ಮಂಜು, ಶಂಕರ್, ರಾಜು,ಆನಂದ್ ಮತ್ತಿತರಿದ್ದರು.
ಪೋಟೋ ಕ್ಯಾಪ್ಷನ್ 23 01 : ತಿ.ನರಸೀಪುರದಲ್ಲಿ ಬಿಜೆಪಿ ವರುಣ ಕ್ಷೇತ್ರದ ಮಂಡಲ ವತಿಯಿಂದ ಶ್ಯಾಂಪ್ರಸಾದ್ ಮುಖರ್ಜಿ ಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ಸೇರಿದಂತೆ ಮುಖಂಡರು ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.