

ಬಳ್ಳಾರಿ: ಕಳೆದ ಎರಡು ತಿಂಗಳಿಂದ ಕುತೂಹಲ ಕೆರಳಿಸಿದ್ದ ಪಾಲಿಕೆ ಮೇಯರ್ ಸ್ಥಾನದ ಚುನಾವಣೆಯ ಹೈಡ್ರಾಮಾಕ್ಕೆ ಬುಧವಾರ ತೆರೆ ಬಿದ್ದಂತಾಯಿತು. ಸ್ಪಷ್ಟ ಬಹುಮತದಿಂದ 31ನೇ ವಾರ್ಡ್‌ನ ಸದಸ್ಯೆ ಬಿ.ಶ್ವೇತಾ ಅವರು ನೂತನ ಮಹಾಪೌರರಾಗಿ ಆಯ್ಕೆಗೊಂಡರು. ಈ ಮೂಲಕ ಕಾಂಗ್ರೆಸ್ ಮೇಲುಗೈ ಸಾಧಿಸಿತು.
ಮೂರನೇ ಬಾರಿ ನಡೆದ ಚುನಾವಣೆಯಲ್ಲಿ ಶ್ವೇತಾ ಅವರು 29 ಮತಗಳ ಸ್ಪಷ್ಟ ಬಹುಮತದೊಂದಿಗೆ 22ನೇ ಅವಧಿಯ ಮೇಯರ್ ಆಗಿ ಆಯ್ಕೆಗೊಂಡಿದ್ದಾರೆ. 21 ಕಾಂಗ್ರೆಸ್ ಸದಸ್ಯರು, ಐವರು ಪಕ್ಷೇತರ ಹಾಗೂ ಇಬ್ಬರು ಶಾಸಕರು, ಒಬ್ಬ ರಾಜ್ಯಸಭೆ ಸದಸ್ಯರ ಸಾಥ್‌ನಿಂದಾಗಿ ಶ್ವೇತಾ ಅವರು ಪಾಲಿಕೆ ಗುದ್ದುಗೆ ಏರಿದರು. ಇನ್ನು ಪಕ್ಷೇತರ ಅಭ್ಯರ್ಥಿ ಮಿಂಚು ಶ್ರೀನಿವಾಸ್ ಮತ್ತು ಕಾಂಗ್ರೆಸ್‌ನ ಸದಸ್ಯ ಕುಬೇರ ಕೊನೆಹಂತದಲ್ಲಿ ನಾಮಪತ್ರ ಹಿಂಪಡೆದರು. ಹಾಗಾಗಿ ಕಾಂಗ್ರೆಸ್ ಶ್ವೇತಾ ಮತ್ತು ಬಿಜೆಪಿಯ ಗುಡಗಂಟಿ ಹನುಮಂತಪ್ಪ ನಡುವೆ ಪೈಪೋಟಿ ಎದುರಾಯಿತು. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ 29 ಮತ್ತು ಬಿಜೆಪಿ ಅಭ್ಯರ್ಥಿ ಪರ 13 ಮತ ಚಲಾವಣೆಗೊಂಡಿತು. ಕೊನೆಯಲ್ಲಿ ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಕಾಂಗ್ರೆಸ್‌ನ ಬಿ.ಶ್ವೇತಾ ಅವರನ್ನು ನೂತನ ಮೇಯರ್ ಆಗಿ ಆಯ್ಕೆಗೊಂಡಿರುವ ಬಗ್ಗೆ ದೃಢಪಡಿಸಿದರು.
ಕಾಂಗ್ರೆಸ್‌ನಲ್ಲಿ ಸಾಕಷ್ಟು ಗೊಂದಲದಿಂದಾಗಿ ಎರಡು ಬಾರಿ ಚುನಾವಣೆಯನ್ನು ಮುಂದೂಡಲಾಗಿತ್ತು. ಕಳೆದ ನ.4ರಂದು ಡಿ.ತ್ರಿವೇಣಿ ಅವರು ರಾಜೀನಾಮೆ ನೀಡಿದ್ದರಿಂದಾಗಿ, ಆ ಸ್ಥಾನಕ್ಕೆ ನಾಲ್ವರು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಕಾಂಗ್ರೆಸ್‌ನಿಂದ ಶ್ವೇತಾ ಬಿ ಮತ್ತು ಕುಬೇರ, ಬಿಜೆಪಿಯಿಂದ ಗುಡಗಂಟಿ ಹನುಮಂತಪ್ಪ , ಪಕ್ಷೇತರರಾಗಿ ಮಿಂಚು ಶ್ರೀನಿವಾಸ್ ಅಂತಿಮ ಕಣದಲ್ಲಿದ್ದರು.
ಈ ಹಿಂದೆ ನ.28ರಂದು ನಡೆಯಬೇಕಿದ್ದ ಮೇಯರ್ ಚುನಾವಣೆಯನ್ನು ಕಾಂಗ್ರೆಸ್‌ನಲ್ಲಿ ಕಾಣಿಸಿಕೊಂಡ ಗುಂಪುಗಾರಿಕೆಯಿಂದಾಗಿ ದಿಢೀರ್ ಮುಂದೂಡಲಾಗಿತ್ತು. ಇದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾಗಬಹುದು ಎನ್ನುವ ಉದ್ದೇಶದಿಂದ ಚುನಾವಣೆಯನ್ನು ಡಿ.19ಕ್ಕೆ ಮಹೂರ್ತ ನಿಗದಿ ಪಡಿಸಲಾಗಿತ್ತು. ಆಗ ಕೂಡ ಪಕ್ಷೇತರ ಅಭ್ಯರ್ಥಿ ಮಿಂಚು ಶ್ರೀನಿವಾಸ್ ಸೇರಿದಂತೆ 11 ಜನ ಸದಸ್ಯರು ಅಜ್ಞಾತ ಸ್ಥಳಕ್ಕೆ ಧಾವಿಸಿದ್ದರಿಂದ ಮತ್ತೆ ಚುನಾವಣೆಯನ್ನು ಮುಂದೂಡಲಾಗಿತ್ತು. ಕೊನೆಗೆ ಕಳೆದ ಎರಡು ತಿಂಗಳ ಪಾಲಿಕೆ ಪಾಲಿಟಿಕ್ಸ್‌ಗೆ ಅಂತ್ಯ ಹಾಡಿದಂತಾಯಿತು.