ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶ್ವೇತಾ ಬಂಡಿ ಅಧಿಕಾರ ಸ್ವೀಕಾರ

congress programme
ಶಿವಮೊಗ್ಗದ ಬಂಜಾರ ಸಮುದಾಯ ಭವನದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ ಅವರು ನೂತನ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿಗೆ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಬಲ್ಕಿಷ್ ಬಾನು, ಜಿ.ಪಲ್ಲವಿ, ಪುಷ್ಪಾ ಶಿವಕುಮಾರ್, ವೇದಾ ವಿಜಯಕುಮಾರ್, ವಿಜಯಲಕ್ಷ್ಮೀ ಪಾಟೀಲ್ ಇತರರಿದ್ದರು.
Published on

ಶಿವಮೊಗ್ಗ: ಮಹಿಳೆಯರು ದೊಡ್ಡ ಸಾಧನೆಗೂ ಸದಾ ಮುಂದಿರುತ್ತಾರೆ. ಅಧಿಕಾರ ಎಂಬುದು ಒಬ್ಬರದ್ದಲ್ಲ. ಎಲ್ಲರೂ ಸೇರಿ ಕೆಲಸ ಮಾಡಿದಾಗ ಪಕ್ಷದ ಸಂಘಟನೆ ಸಾಧ್ಯ ಎಂದು ಕಾಂಗ್ರೆಸ್ ಮುಖಂಡರಾದ ಗೀತಾ ಶಿವರಾಜ್‌ಕುಮಾರ್ ಹೇಳಿದರು.

ನಗರದ ಬಂಜಾರ ಸಮುದಾಯ ಭವನದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ವೇತಾ ಬಂಡಿ ಅವರು ನನ್ನ ಎರಡು ಚುನಾವಣೆಗಳಲ್ಲಿ ಪ್ರಚಾರಕ್ಕೆ ಬಂದಿದ್ದರು. ಆಕೆ ಚಿಕ್ಕ ವಯಸ್ಸಿನವರಾಗಿದ್ದು, ಪಕ್ಷ ಸಣ್ಣ ವಯಸ್ಸಿಗೆ ದೊಡ್ಡ ಜವಾಬ್ದಾರಿ ನೀಡಿರುವುದು ಹೆಮ್ಮೆಯ ಸಂಗತಿ. ಅದನ್ನು ಅವರು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಾರೆಂಬ ವಿಶ್ವಾಸವಿದೆ ಎಂದರು. ಅಧಿಕಾರ ಹಸ್ತಾಂತರಿಸಿ ಮಾತನಾಡಿದ ನಿಕಟಪೂರ್ವ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ, ಮಹಿಳೆ ಅನೇಕ ನೋವುಗಳ ಮೂಲಕ ಸಾರ್ವಜನಿಕ ಕ್ಷೇತ್ರಕ್ಕೆ ಬರುತ್ತಾಳೆ. ಅಧಿಕಾರಕ್ಕೆ ಮಾತ್ರವೇ ಅಲ್ಲ, ಸಾರ್ವಜನಿಕ ಜೀವನದಲ್ಲಿ ತನ್ನನು ತಾನು ತೊಡಗಿಸಿಕೊಳ್ಳಬೇಕೆನ್ನುವ ಕಾರಣಕ್ಕೆ ನಾವೆಲ್ಲ ಇಲ್ಲಿ ಬಂದಿದ್ದೇವೆ. ನಮಗೆ ಉತ್ತೇಜನ ಬಹಳ ಮುಖ್ಯ ಎಂದರು. ಎಂಎಲ್‌ಸಿ ಬಲ್ಕಿಷ್ ಬಾನು, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ, ಪ್ರಮುಖರಾದ ಜಿ.ಪಲ್ಲವಿ, ಪುಷ್ಪಾ ಶಿವಕುಮಾರ್, ವೇದಾ ವಿಜಯಕುಮಾರ್, ವಿಜಯಲಕ್ಷ್ಮೀ ಪಾಟೀಲ್, ರೇಖಾ ರಂಗನಾಥ್ ಮತ್ತಿತರರಿದ್ದರು.

ನಾನು ಪದಗ್ರಹಣವನ್ನು ಅಧಿಕಾರವೆಂದು ಭಾವಿಸುವುದಿಲ್ಲ. ಇದೊಂದು ಜವಾಬ್ದಾರಿ ಆಗಿದೆ. ಧ್ವನಿ ಇಲ್ಲದ ಶೋಷಿತರ ಧ್ವನಿಯಾಗುವುದು ನನ್ನ ಉದ್ದೇಶ. ಮಹಿಳಾ ಸಬಲೀಕರಣ ಎನ್ನುವುದು ಕೇವಲ ವಾಕ್ಯ ಅಥವಾ ಘೋಷಣೆ ಆಗಬಾರದು. ಅದು ಅವಳ ಬದುಕಿನ ಭಾಗವಾಗಿರಬೇಕು. ಕುಟುಂಬದಿಂದ ಹಿಡಿದು ರಾಜಕಾರಣದವರೆಗೂ ಅನ್ವಯವಾಗಬೇಕು. -ಶ್ವೇತಾ ಬಂಡಿ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net