

ಮಂಗಳೂರು : ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಂಗಳೂರು ಶಾಖೆ ಹಾಗೂ ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಶಾಖೆ ಜಂಟಿ ಆಶ್ರಯದಲ್ಲಿ 26ನೇ ವಾರ್ಷಿಕ ಡಾ. ಸೋಮಣ್ಣ ಸ್ಮಾರಕ ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಫರ್ಧಾಕೂಟ ನಗರದ ಫಾ.ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಆಗೊಸ್ಟ್ 12 ಮತ್ತು 13ರಂದು ನಡೆಯಲಿದೆ.
ಕೇವಲ ಐಎಂಎ ಸದಸ್ಯರು ಹಾಗೂ ಅವರ ಕುಟುಂಬದ ಸದಸ್ಯರು ಈ ಸ್ಪರ್ಧಾಕೂಟದಲ್ಲಿ ಭಾಗವಹಿಸಬಹುದು ಎಂದು ಐಎಂಎ ಮಂಗಳೂರು ಶಾಖೆಯ ಅಧ್ಯಕ್ಷ ಡಾ.ವೇಣುಗೋಪಾಲ್ ಡಿ. ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸಹಕುಲಾಧಿಪತಿ ಡಾ. ಹೆಚ್.ಎಸ್. ಬಳ್ಳಾಲ್ ಆ.12 ರಂದು ಬೆಳಗ್ಗೆ 10.30ಕ್ಕೆ ಸ್ಪರ್ಧಾಕೂಟವನ್ನು ಉದ್ಘಾಟಿಸುವರು. ವಿವಿಧ ವಯೋಮಿತಿಯ ಸ್ಫರ್ಧಾಕೂಟದ ವಿವರ ನೀಡಿದ ಸ್ಪರ್ಧಾಕೂಟದ ಸಂಘಟನಾ ಕಾರ್ಯದರ್ಶಿ ಡಾ.ನಂದಕಿಶೋರ್ ಬಿ. ಅವರು ಸ್ಫರ್ಧಾವಿಜೇತರಿಗೆ ಆಕರ್ಷಕ ಪ್ರಶಸ್ತಿ ಮತ್ತು ಪ್ರಮಾಣಪತ್ರವನ್ನು ವಿತರಿಸಲಾಗುವುದು. ರಾಜ್ಯದ ವಿವಿಧ ಶಾಖೆಗಳಿಂದ ಸುಮಾರು 150 ತಂಡಗಳು ಸ್ಪರ್ಧಾಕೂಟದಲ್ಲಿ ಭಾಗವಹಿಸಲಿವೆ ಎಂದು ಅವರು ಮಾಹಿತಿ ನೀಡಿದರು. ಐಎಂಎ ಮಂಗಳೂರು ಶಾಖೆಯ ಚುನಾಯಿತ ಅಧ್ಯಕ್ಷ ಡಾ.ರಂಜನ್ ಹಾಗೂ ಸಂಸ್ಥೆಯ ಮಾಧ್ಯಮ ಸಲಹೆಗಾರ ವಸಂತ್ ಮಲ್ಯ ಉಪಸ್ಥಿತರಿದ್ದರು.