ಶುಶಾಂತ್ ಫ್ರೆಂಡ್ಸ್ ತಂಡ ಚಾಂಪಿಯನ್

Shushant Friends team champion
Published on

ಮಡಿಕೇರಿ:
ಮೂರ್ನಾಡುವಿನ ಟೀಂ ಹೈ-ಲೋನಾ ವತಿಯಿಂದ ಈಚೆಗೆ ನಡೆದ ಮೂರ್ನಾಡು ಚಾಂಪಿಯನ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಸೀಸನ್-೨ ರಲ್ಲಿ ಶುಶಾಂತ್ ಫ್ರೆಂಡ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಎಫ್ರೋನ್ ತಂಡ ೨ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಮೂರ್ನಾಡುವಿನ ಶ್ರೀಲಾಲು ಮುದ್ದಯ್ಯ ಮೈದಾನದಲ್ಲಿ ಟೀಂ ಹೈ-ಲೋನಾ ಸಂಘಟನೆಯ ನಾಯಕ ಪಿ.ಎಸ್.ಇಸ್ಮಾಯಿಲ್ ಹಾಗೂ ರಂಜಿತ್ ಕುಮಾರ್ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಗ್ರಾಮದ ಹನ್ನೆರಡು ಯುವ ಕ್ರಿಕೆಟ್ ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮೂರ್ನಾಡು ಶ್ರೀಅನ್ನಪೂರ್ಣೇಶ್ವರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಡಾ.ಮಹಾಬಲೇಶ್ವರ್ ಭಟ್, ಕ್ರೀಡೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಆದ್ದರಿಂದ ಪ್ರಸ್ತುತ ದಿನಗಳಲ್ಲಿ ಕ್ರೀಡಾಕೂಟಗಳನ್ನು ಹೆಚ್ಚು ಹೆಚ್ಚು ಆಯೋಜಿಸುವ ಅಗತ್ಯವಿದೆ. ಯುವಕ, ಯುವತಿಯರು ದುಶ್ಚಟಗಳಿಗೆ ಬಲಿಯಾಗಿ, ಕಾಲಹರಣ ಮಾಡುವುದನ್ನು ಬಿಟ್ಟು ಬಿಡುವಿನ ಸಮಯದಲ್ಲಿ ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕೂಡ ಮೂರ್ನಾಡುವಿನಲ್ಲಿ ನಿರಂತರವಾಗಿ ಕ್ರೀಡಾಕೂಟಗಳು ನಡೆಯುವಂತಾಗಲಿ, ಇದಕ್ಕೆ ಸದಾ ಸಹಕಾರ ನೀಡುವುದಾಗಿ ಹೇಳಿದರು.

ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಕೆ.ಜೆ.ಜಾಶಿರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕ್ರೀಡಾಕೂಟವನ್ನು ಆಯೋಜಿಸುವುದು ಸಣ್ಣ ಕೆಲಸವಲ್ಲ. ಸಂಘಟನಾ ಮನೋಭಾವನೆ ಮತ್ತು ಆರ್ಥಿಕ ಸ್ಥಿತಿಗತಿ ಸದೃಢವಾಗಿರಬೇಕು. ಜಾತಿ, ಮತ, ಧರ್ಮದ ಭೇದವಿಲ್ಲದೆ ಮೂರ್ನಾಡುವಿನಲ್ಲಿ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.

ಮೂರ್ನಾಡು ಗ್ರಾ.ಪಂ ಸದಸ್ಯ ಈರ ಸುಬ್ಬಯ್ಯ, ಬಾಬಾ ಸೌಂಡ್ಸ್ ಮಾಲೀಕ ಅರುಣ್ ರೈ, ಮೂರ್ನಾಡು ಅಯ್ಯಪ್ಪ ದೇವಾಲಯದ ಪ್ರಜ್ವಲ್, ಪ್ರಮುಖರಾದ ಸೈಮನ್, ಮೂರ್ತಿ, ಆಟೋ ಚಾಲಕ ಸುಂದರ್, ಪಂದ್ಯಾವಳಿ ಆಯೋಜಕರಾದ ಪಿ.ಎಸ್.ಇಸ್ಮಾಯಿಲ್, ರಂಜಿತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಅತಿಥಿ ಗಣ್ಯರು ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net