

ಎ.ಆರ್. ರಘುರಾಮ ಮೈಸೂರು
ಅಯೋಧ್ಯೆಯಲ್ಲಿ ಜ. 22ರಂದು ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠೆ ಸಂದರ್ಭ ಆಯೋಜನೆಗೊಂಡಿರುವ ‘ಭಾರತ ಸಂಗೀತ ವೈಭವ’- ವಿಶೇಷ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದುಷಿ ಶುಭಾ ಸಂತೋಷ್ ಅವರ ವೀಣಾನಾದ ಝೇಂಕಾರ ಮೊಳಗಲಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಭರತಭೂಮಿಯ ವಿಶೇಷ ಸಂಗೀತ ವಾದ್ಯಗಳ ಕಾರ್ಯಕ್ರಮವನ್ನು 22ರ ಮಧ್ಯಾಹ್ನ 12.20ರಿಂದ 1ರ ವರೆಗೆ ಹಮ್ಮಿಕೊಂಡಿದೆ. ಛತ್ತೀಸ್‌ಗಢದ ತಂಬೂರಿ, ಕರ್ನಾಟಕದ ವೀಣೆ, ಮಧ್ಯಪ್ರದೇಶದ ಸಂತೂರ್, ಆಂಧ್ರದ ಘಟಂ, ತಮಿಳುನಾಡಿನ ಮೃದಂಗ, ಮಹಾರಾಷ್ಟ್ರದ ಸುಂದರಿ ವಾದ್ಯ ಸೇರಿದಂತೆ ವಿವಿಧ ರಾಜ್ಯದ ವಿಭಿನ್ನ ವಾದ್ಯಗಳ ಕಲಾವಿದರಿಂದ ಸಂಗೀತ ನಾದ ಸೇವೆ ರಾಮನಿಗೆ ಸಮರ್ಪಣೆಯಾಗಲಿದೆ. ಮೂರ್ತಿ ಪ್ರತಿಷ್ಠಾಪನೆ ಸಂದರ್ಭ ವೇದ ಮಂತ್ರ ಘೋಷ, ಧಾರ್ಮಿಕ ಪಠಣ ಜರುಗಲಿದ್ದು, ನಂತರ ಪ್ರಖ್ಯಾತ ಕಲಾವಿದರಿಂದ ವಾದ್ಯ ವೈಭವ ಸಂಪನ್ನಗೊಳ್ಳಲಿದೆ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅಧಿಕೃತ ವೇಳಾಪಟ್ಟಿ ಘೋಷಣೆ ಮಾಡಿದ್ದಾರೆ.
ಕೇಂದ್ರ ಸಂಗೀತ ಮತ್ತು ನೃತ್ಯ ಅಕಾಡೆಮಿ ಉನ್ನತ ಮಟ್ಟದ ಸಮಿತಿ ಕರ್ನಾಟಕದಿಂದ ಬೆಂಗಳೂರಿನ ವಿದುಷಿ ಶುಭಾ ಸಂತೋಷ್ ಅವರನ್ನು ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿ ಅಧಿಕೃತ ಆಹ್ವಾನ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ.
ಪರಿಚಯ: ಬೆಂಗಳೂರಿನ ಜಯಸಿಂಹ- ಅಮೃತಾ ಅವರ ಪುತ್ರಿ ಶುಭಾ ಬೆಂಗಳೂರು ವಿವಿ ಎಂ. ಮ್ಯೂಸಿಕ್ (ವೀಣೆ) ಪರೀಕ್ಷೆಯಲ್ಲಿ ಪ್ರಥಮ ರ‌್ಯಾಂಕ್ ಗಳಿಸಿ ಚಿನ್ನದ ಪದಕ ಪುರಸ್ಕೃತರಾಗಿದ್ದಾರೆ. ವಿದ್ವಾನ್ ಶ್ರೀನಿವಾಸ ಮೂರ್ತಿ ಆಚಾರ್ ಮತ್ತು ವಿದುಷಿ ಸುಧಾ ವಾದಿರಾಜ್ ಅವರ ಶಿಷ್ಯೆಯಾಗಿ ವೀಣಾ ವಾದನ ಅಭ್ಯಾಸ ಮಾಡಿರುವ ಶುಭಾ ಅವರು ವಿದ್ವಾನ್ ಎಚ್.ಎಸ್. ಸುಧೀಂದ್ರ ಅವರಲ್ಲಿ ಉನ್ನತ ಹಂತದ ಕಛೇರಿ ಶೈಲಿಗಳನ್ನು ಕರಗತ ಮಾಡಿಕೊಂಡಿದ್ದಾರೆ. ಕಳೆದ 10 ವರ್ಷಗಳಿಂದ ನೂರಾರು ಕಛೇರಿ ನೀಡಿ ವಿಖ್ಯಾತರಾಗಿದ್ದಾರೆ.
ಹಲವು ಯೂ ಟ್ಯೂಬ್ ಚಾನಲ್‌ನಲ್ಲಿ ಇವರ ವೀಣಾ ಮತ್ತು ಗಾಯನ ಪ್ರಸ್ತುತಿ ಪ್ರಸಾರವಾಗಿವೆ. ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅವರ 100ಕ್ಕೂ ಹೆಚ್ಚು ಗೀತೆ ರಚನೆಗಳಿಗೆ ರಾಗ ಸಂಯೋಜಿಸಿ ‘ವಿದ್ಯೇಶ ನಾದ ವೈಭವ’ ಸರಣಿಯಲ್ಲಿ ಹಾಡಿರುವುದು ಮತ್ತು ರಾಜ್ಯದ ವಿವಿಧೆಡೆ ಗಾಯನ ಕಾರ್ಯಾಗಾರ ನಡೆಸಿರುವುದು ವಿಶೇಷ. ರಾಮನ ಜನ್ಮಸ್ಥಾನದಲ್ಲಿ ಶುಭಾ ಅವರ ವೀಣಾ ಪ್ರಸ್ತುತಿ ‘ವೀಣೆಯ ಬೆಡಗಿದು ಮೈಸೂರು’ (ಕರ್ನಾಟಕ ರಾಜ್ಯ) ಎಂಬ ಖ್ಯಾತಿಗೆ ಕಳಸ ವಿಟ್ಟಂತಾಗಿದೆ.