ತುಸುತಗ್ಗಿದ ಕೃಷ್ಣೆ ದೂರವಾಗದ ನೆರೆ ಆತಂಕ

29 DVD 02
ಕೃಷ್ಣಾನದಿಗೆ 2.99ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ಕೊಪ್ಪರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನೀರು ಕಡಿಮೆಯಾಗಿರುವುದು.
Published on

ದೇವದುರ್ಗ: ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ಹರಿಸುವ ನೀರಿನ ಪ್ರಮಾಣದಲ್ಲಿ 28ಸಾವಿರ ಕ್ಯೂಸೆಕ್ ಕಡಿಮೆಯಾಗಿದ್ದರೂ ರೈತರಲ್ಲಿ ಮನೆಮಾಡಿದ್ದ ನೆರೆಆತಂಕ ಇನ್ನೂ ದೂರವಾಗಿಲ್ಲ. ಡ್ಯಾಂನಲ್ಲಿ ಒಳಹರಿವು ಸ್ವಲ್ಪ ಕಡಿಮೆಯಾಗಿದ್ದರಿಂದ ನದಿಗೆ 2,99,620 ಕ್ಯೂಸೆಕ್ ನೀರು ಹರಿಸಲಾಗಿದೆ.

ಜಲಾಶಯದಲ್ಲಿ ಸೋಮವಾರ ಬೆಳಗ್ಗೆ 3ಲಕ್ಷ ಕ್ಯೂಸೆಕ್ ನೀರು ಒಳಗೆ ಹರಿದುಬರುತ್ತಿದ್ದು ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆ ಇರುವ ಕಾರಣ ಹೊರಹರಿವು ಕಡಿಮೆ ಮಾಡಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ 24ಟಿಎಂಸಿ ಅಡಿಗೆ ಇಳಿಕೆ ಮಾಡಲಾಗಿತ್ತು. ಒಳಹರಿವು ಇನ್ನು ಕಡಿಮೆಯಾದರೆ ನದಿಗೆ ಹರಿಸುವ ನೀರು ಇಳಿಕೆ ಮಾಡಿ ಡ್ಯಾಂನಲ್ಲಿ ನೀರು ಸಂಗ್ರಹಕ್ಕೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಮುಂದಾಗಲಿದ್ದಾರೆ.

ತಾಲೂಕಿನಲ್ಲಿ 57ಕಿಮೀ ವಿಸ್ತೀರ್ಣದಲ್ಲಿ ಹರಿಯುವ ಕೃಷ್ಣೆ 25ಕ್ಕೂ ಹೆಚ್ಚುಹಳ್ಳಿಗಳನ್ನು ತಾಗಿಕೊಂಡಿದೆ. ಭಾನುವಾರ 3.27ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ಬಹುತೇಕ ಗ್ರಾಮಗಳ ರೈತರ ಜಮೀನಿಗೆ ನೀರು ನುಗ್ಗಿದ್ದವು. ವೀರಗೋಟ, ಲಿಂಗದಹಳ್ಳಿ, ಬಾಗೂರು, ಅಂಜಳ, ಗೋಪಳಾಪುರ, ಹೂವಿನಹೆಡಗಿ, ಕೊಪ್ಪರ, ಹೇರೂರು, ಕರ್ಕಿಹಳ್ಳಿ, ಗಾಗಲ್, ಗೂಗಲ್ ಗ್ರಾಮದಲ್ಲಿ ಹಾನಿಪ್ರಮಾಣ ಅಧಿಕವಾಗಿದೆ.

ಐದನೇ ದಿನವೂ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಿದ್ದು ಶ್ರೀಗಡ್ಡೆಗೂಳಿ ಬಸವೇಶ್ವರ ದೇವಸ್ಥಾನಕ್ಕೆ ಹಾಕಿದ್ದ ಜಲದಿಗ್ಬಂದನ 15ನೇ ದಿನವೂ ಮುಂದುವರಿದಿದೆ. ವೀರಗೋಟದ ಶ್ರೀಮೌನಲಿಂಗೇಶ್ವರ ದೇವಸ್ಥಾನದ ಮೆಟ್ಟಿಲು ಇನ್ನೂ ನೀರಲ್ಲಿ ಮುಳುಗಿವೆ. ಅಂಜಳ ಗ್ರಾಮದ ಬಸವೇಶ್ವರ ದೇವಸ್ಥಾನ, ಕೊಪ್ಪರದ ಶ್ರೀಲಕ್ಷ್ಮಿನರಸಿಂಹ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಶ್ರೀಆಂಜಿನೇಯ ದೇವಸ್ಥಾನ ಜಲಾವೃತಗೊಂಡಿವೆ. ಅರಸಿಣಿಗಿ ಶ್ರೀ ಅಣೆಮಲ್ಲೇಶ್ವರ ದೇವಸ್ಥಾನ ಹಾಗೂ ಗೂಗಲ್ ಅಲ್ಲಮಪ್ರಭು ದೇವಸ್ಥಾನದ ಸಮೀಪ ನೀರು ಬಂದಿವೆ.

ದೂರವಾಗದ ದುಗುಡ: ಕೃಷ್ಣಾನದಿಗೆ ಭಾನುವಾರ 3.27ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ಹಲವು ರೈತರ ಜಮೀನಿನಲ್ಲಿ ಇನ್ನೂ ನೀರು ಹರಿಯುತ್ತಿವೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದರೂ ನದಿದಂಡೆ ರೈತರಲ್ಲಿ ಮನೆಮಾಡಿರುವ ನೆರೆಯ ಆತಂಕ ಇನ್ನೂ ದೂರವಾಗಿಲ್ಲ. ಸದ್ಯ 2.99ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿರುವ ಕಾರಣ ರೈತರ ಜಮೀನಿನ ಮೂಲಕ ನದಿನೀರು ಹರಿಯುತ್ತಿವೆ. ನದಿಯಲ್ಲಿ ಸ್ವಲ್ಪ ನೀರು ಕಡಿಮೆಯಾಗಿದ್ದು ಯಾವ ಕ್ಷಣದಲ್ಲಾದರೂ ಏರಿಕೆಯಾಗಬಹುದು ಎನ್ನುವ ಆತಂಕ ರೈತರದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net