

ಗುಬ್ಬಿ: ಸನಾತನ ಧರ್ಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲ ಆಚರಣೆ ಪರಂಪರೆ ಮುನ್ನಡೆಸಬೇಕಿದೆ. ಈ ನಿಟ್ಟಿನಲ್ಲಿ ಪರೋಪಕಾರ, ಪ್ರತ್ಯುಪಕಾರ ಮಹತ್ವದ ಪಾತ್ರ ವಹಿಸುತ್ತದೆ ಎಂದು ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಚಿದಂಬರಾಶ್ರಮದಲ್ಲಿ ಆಯೋಜಿ ಸಿದ್ದ ವಿಜಯಯಾತ್ರೆ-2022 ಕಾರ್ಯಕ್ರಮದಲ್ಲಿ ಆಶೀ ರ್ವಚನ ನೀಡಿ, ಧರ್ಮಪಾಲನೆ ಸಮಾಜದ ಉಳಿವಿಗೆ ಅತ್ಯಗತ್ಯ. ಪಾಲನೆಯಲ್ಲಿ ಹಲವು ಕ್ರಮಗಳನ್ನು ಅನುಸರಿಸಬೇಕಿದೆ. ಈ ನಿಟ್ಟಿನಲ್ಲಿ ಆದಿಗುರು ಶಂಕರಾಚಾರ್ಯರು ನೀಡಿದ ಮಾರ್ಗದರ್ಶನ ಎಂದೆಂದಿಗೂ ಪ್ರಸ್ತುತ ಎಂದರು.
ವೇದಾಧ್ಯಯನ ಗುರುಕುಲ ಪದ್ದತಿಯಲ್ಲಿ ನಡೆದು ಬಂದಿದೆ. ರಾಜ್ಯದಲ್ಲಿ ಈ ಕಾರ್ಯ ನಡೆಸುವ ಗುರುಕುಲ ಆಶ್ರಮಗಳಲ್ಲಿ ಗುಬ್ಬಿಯ ಚಿದಂಬರಾಶ್ರಮ ಕೂಡ ಒಂದಾಗಿದೆ. ಎಂಟು ದಶಕದಿಂದ ಸಂಸ್ಕೃತ ವೇದ ಪಾಠ ನಡೆಸಿಕೊಂಡು ಅನೇಕ ವಿದ್ವತ್ ಪೂರ್ಣರನ್ನು ಸಹ ಕೊಡುಗೆ ನೀಡಿದೆ. ಶೃಂಗೇರಿ ಪೀಠದ ಜತೆ ನಂಟು ಇರುವ ಈ ಆಶ್ರಮಕ್ಕೆ ಮತ್ತಷ್ಟು ಚೈತನ್ಯ ಸಿಗಲಿ ಎಂದು ಆಶೀರ್ವದಿಸಿ ಮನುಷ್ಯನಲ್ಲಿನ ಆತ್ಮಶುದ್ಧಿಗೆ ನಮ್ಮ ಸನಾತನ ಧರ್ಮ ನಿಯಮಾನುಸಾರ ಪಾಲಿಸಬೇಕು ಎಂದರು.
ಆಶ್ರಮದ ಶ್ರೀ ದತ್ತಾಂಜನೆಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಯಾಗಶಾಲೆಗೆ ಭೇಟಿ ನೀಡಿದರು.
ಗುರುಕುಲ ವಿದ್ಯಾರ್ಥಿಗಳು ವೇದ ಘೋಷ ನಡೆಸಿಕೊಟ್ಟರು. ಚಿದಂಬರಾಶ್ರಮ ಅಧ್ಯಕ್ಷ ಶಿವಚಿದಂಬರ ಶರ್ಮಾ, ಬಿಜೆಪಿ ಮುಖಂಡ ಜಿ.ಎನ್. ಬೆಟ್ಟಸ್ವಾಮಿ, ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ, ಸದಸ್ಯ ಜಿ. ಆರ್. ಶಿವಕುಮಾರ್, ಆಶ್ರಮದ ಸಚ್ಚಿದಾನಂದ, ಶಂಕರ್ ಶ್ರೀರಾಮ, ರಾಘವೇಂದ್ರ, ಗುಬ್ಬಿ ವಿಪ್ರ ಸಮಾಜದ ಸಿ.ಎಸ್.ಅರುಣ್, ಜಿ.ಆರ್.ಶ್ರೀನಿವಾಸ್ ಪ್ರಸಾದ್, ಜಿ.ಸತೀಶ್, ಡಿ.ಎಸ್. ರವಿಕುಮಾರ್ ಇತರರು ಇದ್ದರು.