

ತುಮಕೂರು: ಮಹಾನಗರ ಪಾಲಿಕೆ ಖಾಲಿ ನಿವೇಶನಗಳಲ್ಲಿ ಆಳೆತ್ತರ ಬೆಳೆದು ನಿಂತಿರುವ ಪೊದೆಗಳು ಕಳ್ಳಕಾಕರ ಅಡಗು ತಾಣವಾಗಿದೆಯಲ್ಲದೆ, ವಿಷಜಂತುಗಳ ವಾಸಸ್ಥಾನವಾಗಿವೆ.
ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಮಾಲೀಕರಿಗೆ ನೋಟಿಸ್ ನೀಡಬೇಕಾದ ಪಾಲಿಕೆ ಸಿಬ್ಬಂದಿ ದಿವ್ಯನಿರ್ಲಕ್ಷೃ ತಾಳಿದ್ದಾರೆ.
ಪಾಲಿಕೆ 35 ವಾರ್ಡ್‌ಗಳಲ್ಲಿ 30 ಸಾವಿರಕ್ಕೂ ಹೆಚ್ಚು ಖಾಲಿ ನಿವೇಶನಗಳಿದ್ದು, ಈ ನಿವೇಶನಗಳಲ್ಲಿ ಗಿಡಗಂಟಿ ಬೆಳೆದು ನಿಂತಿವೆ. ನಗರದ ಪ್ರತಿಷ್ಠಿತ ಬಡಾವಣೆಗಳಾದ ಜಯನಗರಪೂರ್ವ, ಪಶ್ಚಿಮ, ಅಶೋಕನಗರ, ಕುವೆಂಪುನಗರ, ಗೋಕುಲಬಡಾವಣೆ, ದೇವರಾಯಪಟ್ಟಣ ಹೊಸಬಡಾವಣೆ ಹಾಗೂ ಹೊರವಲಯದ ವಾರ್ಡ್‌ಗಳಲ್ಲಿ ಖಾಲಿನಿವೇಶನಗಳು ಹೆಚ್ಚಿದ್ದು, ಈ ನಿವೇಶನಗಳಲ್ಲಿ ಗಿಡಗಂಟೆ ದೊಡ್ಡದಾಗಿ ಬೆಳೆದು ಪೊದೆಗಳು ನಿರ್ಮಾಣವಾಗಿವೆ. ಅಲ್ಲದೆ, ಮಳೆನೀರು, ಕೊಳಚೆನೀರಿನಿಂದ ಖಾಲಿನಿವೇಶನಗಳು ರೋಗುರುಜಿನಗಳು ಹರಡುವ ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳಗಾಗಿವೆ.
ಪರಿಸರ ಹಾಗೂ ಆರೋಗ್ಯಕ್ಕೆ ಮಾರಕವೆನಿಸಿರುವ ಈ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ಕ್ರಮಕೈಗೊಳ್ಳುವ ಬಗ್ಗೆ ಪಾಲಿಕೆಯ ಆರೋಗ್ಯ ಇಲಾಖೆಯಾಗಲಿ, ಪರಿಸರ ಇಲಾಖೆಯಾಗಲಿ ದಿಟ್ಟ ಕ್ರಮಕೈಗೊಂಡಿಲ್ಲ. ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿಕೊಳ್ಳುವ ಹೊಣೆ ಸಂಬಂಧಪಟ್ಟ ಮಾಲೀಕರದ್ದು. ಆದರೆ, ಪಾಲಿಕೆ ಒಡೆತನದ ಖಾಲಿ ಜಾಗ ಹಾಗೂ ಪಾರ್ಕ್‌ಗಳನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಪಾಲಿಕೆ ಸಿಬ್ಬಂದಿ ಬೇಜವಾಬ್ದಾರಿತನ ತೋರಿರುವುದು ಸ್ವಚ್ಛ, ಸುಂದರ ನಗರ ನಿರ್ಮಾಣಕ್ಕೆ ನೀಡಿರುವ ಕೊಡುಗೆಯಾಗಿದೆ.
ನಗರದಲ್ಲಿ ಒಟ್ಟು 1,07,000 ನಿವೇಶನಗಳಿದ್ದು, 78 ಸಾವಿರ ನಿವೇಶನಗಳಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಉಳಿದ 29 ಸಾವಿರ ನಿವೇಶನಗಳ ಖಾಲಿ ಇವೆ. ಬಹುತೇಕ ನಿವೇಶನಗಳಲ್ಲಿ ಬೇಲಿಗಿಡ, ಕಾಂಗ್ರೆಸ್ ಗಿಡ ದಟ್ಟವಾಗಿ ಬೆಳೆದುನಿಂತಿವೆ. ಇನ್ನೂ ಖಾಲಿ ನಿವೇಶನಗಳಲ್ಲಿ ಡರ್ಬಿಸ್‌ಗಳನ್ನು ಸಹ ಹಾಕಿ ನೆರೆಹೊರೆ ಮನೆಗಳು ವಾಸಿಸಲು ಕಷ್ಟಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಹೊರವಲಯದ ಖಾಲಿ ನಿವೇಶನಗಳಲ್ಲಿ ಚಿರತೆಗಳು ಅಡಗಿಕೊಂಡಿದ್ದ ನಿದರ್ಶನಗಳಿವೆ.
ಈ ಬಗ್ಗೆ ಪಾಲಿಕೆ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇನ್ನೂ ಕಾರ್ಪೋರೇಟರ್‌ಗಳು ವಾರ್ಡ್‌ಗಳಿಗೆ ಕಂಟಕವಾಗಿರುವ ಖಾಲಿ ನಿವೇಶನಗಳ ಸ್ವಚ್ಛತೆಗೆ ಗಮನಹರಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಖಾಲಿ ನಿವೇಶನಗಳು, ಪಾರ್ಕ್‌ಗಳಲ್ಲಿ ಗಿಡಗಂಟೆಗಳು ಬೆಳೆದುನಿಂತಿದ್ದು ಅಪರಾಧ ಚಟುವಟಿಕೆಗಳಿಗೆ ಹೇಳಿ ಮಾಡಿಸಿದಂತಿದೆ. ದಟ್ಟವಾದ ಪೊದೆಗಳನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಿದೆ ಪರಿಸರ ಇಲಾಖೆ ದಿವ್ಯನಿರ್ಲಕ್ಷೃತಾಳಿದೆ. ಕಟ್ಟಿದ ಚರಂಡಿ ನೀರು ಈ ಖಾಲಿ ನಿವೇಶಗಳಲ್ಲಿ ಹರಿದು ಕೊಳಚೆಗುಂಡಿ ನಿರ್ಮಾಣವಾಗಿ, ಚಿಕೂನ್‌ಗುನ್ಯ, ಡೆಂೆ, ಮಲೇರಿಯಾದಂತಹ ರೋಗಗಳು ಹರಡುತ್ತಿವೆ. ಖಾಲಿ ನಿವೇಶನಗಳನ್ನು ಸ್ವಚ್ಛ ಮಾಡದೆ ರೋಗರುಜಿನಗಳ ಸೃಷ್ಟಿಗೆ ಕಾರಣಕರ್ತರಾಗಿರುವ ಮಾಲೀಕರಿಗೆ ದಂಡ ವಿಧಿಸಬೇಕು. ಪಾರ್ಕ್‌ಗಳು, ಪಾಲಿಕೆ ಜಾಗಗಳನ್ನು ಪಾಲಿಕೆ ಸಿಬ್ಬಂದಿ ಸ್ವಚ್ಛಗೊಳಿಸಬೇಕು. ಡಾ.ಡಿ.ಜೆ.ಮೋಹನ್ ಪರಿಸರ ವಿಜ್ಞಾನಿ ಖಾಲಿ ನಿವೇಶನಗಳ ಸ್ವಚ್ಛಗೊಳಿಸಿಕೊಳ್ಳುವುದು ಸಂಬಂಧಪಟ್ಟ ಮಾಲೀಕರ ಜವಾಬ್ದಾರಿ. ಪಾರ್ಕ್ ಹಾಗೂ ಸಿಎ ನಿವೇಶನ, ಪಾಲಿಕೆ ಜಾಗಗಳನ್ನು ಶೀಘ್ರ ಸ್ವಚ್ಛಗೊಳಿಸಲಾಗುವುದು. ಖಾಲಿ ನಿವೇಶನಗಳ ಸ್ವಚ್ಛತೆ ಮಾಡದ ಮಾಲೀಕರಿಗೆ ದಂಡ ವಿಧಿಸಲು ಸಾಮಾನ್ಯಸಭೆ ಮುಂದಿಟ್ಟು ಒಪ್ಪಿಗೆ ಪಡೆಯಲಾಗುವುದು. ಆಸ್ತಿತೆರಿಗೆ ಜತೆಗೆ ದಂಡ ವಿಧಿಸಲಾಗುವುದು. 3 ತಿಂಗಳು ಗಡುವು ನೀಡಿ, ಖಾಲಿನಿವೇಶನಗಳ ಸ್ವಚ್ಛಗೊಳಿಸದೇ ಇರುವ ಮಾಲೀಕರನ್ನು ವಿಶೇಷ ತಂಡ ರಚಿಸಿ ಪತ್ತೆ ಹಚ್ಚಿ ನೋಟಿಸ್ ನೀಡಿ ಕಠಿಣಕ್ರಮಕೈಗೊಳ್ಳಲಾಗುವುದು. ರೇಣುಕಾ ಆಯುಕ್ತೆ, ಮಹಾನಗರ ಪಾಲಿಕೆ