

ನಾಗಮಂಗಲ: ತಾಲೂಕಿನ ಪುರಾಣ ಪ್ರಸಿದ್ಧ ಹಾಗೂ ಸಾಲಾದ್ರಿ ಕ್ಷೇತ್ರವೆಂದೇ ಪ್ರಖ್ಯಾತಿ ಹೊಂದಿರುವ ಕೋಟೆಬೆಟ್ಟದ ಶ್ರೀಕೋಟೆವೆಂಕಟ ರಮಣಸ್ವಾಮಿ ಬ್ರಹ್ಮರಥೋತ್ಸವ ಮಾಘಶುದ್ಧ ಹುಣ್ಣಿಮೆಯ ದಿನವಾದ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಜಾತ್ರಾ ಮಹೋತ್ಸವದ ಪ್ರಯುಕ್ತ ಬೆಳಗ್ಗೆಯಿಂದಲೇ ಗ್ರಾಮದ ಚಿಕ್ಕಬೆಟ್ಟದ ಶ್ರೀಕೋಟೆವೆಂಕಟರಮಣಸ್ವಾಮಿ ದೇವಾಲಯದಲ್ಲಿ ಹೋಮ-ಹವನಾದಿಗಳು ಸೇರಿದಂತೆ ಅನೇಕ ಧಾರ್ಮಿಕ ಕೈಂಕರ್ಯಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ಜರುಗಿದವು. ಮೂಲ ವಿಗ್ರಹ ಮೂರ್ತಿಗೆ ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಅಲಂಕಾರದೊಂದಿಗೆ ಮಹಾಮಂಗಳಾರತಿಯ ನಂತರ ಸರ್ವಾಲಂಕೃತ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ ಮಂಗಳವಾದ್ಯ ಹಾಗೂ ವೇದ-ಘೋಷಗಳೊಂದಿಗೆ ರಥೋತ್ಸವ ನಡೆಯಿತು.
ರಥೋತ್ಸವಕ್ಕೆ ಚಾಲನೆ: ತಾಲೂಕು ಆಡಳಿತದ ವತಿಯಿಂದ ಗ್ರೇಡ್-2 ತಹಸೀಲ್ದಾರ್ ಪ್ರಕಾಶ್ ಧಾರ್ಮಿಕ ವಿಧಿ ವಿಧಾನದಂತೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಅಕ್ಕಪಕ್ಕದ ಗ್ರಾಮಸ್ಥರು ಸೇರಿದಂತೆ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಬ್ರಹ್ಮರಥೋತ್ಸವದಲ್ಲಿ ವಿರಾಜಮಾನನಾದ ಶ್ರೀಕೋಟೆ ವೆಂಕಟರಮಣಸ್ವಾಮಿಯ ರಥವನ್ನು ಎಳೆದರು. ಈ ಮಧ್ಯೆ ವೆಂಕಟರಮಣ, ಗೋವಿಂದಾ,,, ಗೋವಿಂದಾ,,, ಎಂಬ ಭಕ್ತರ ಕೂಗು ಮುಗಿಲು ಮುಟ್ಟಿತು. ರಥಕ್ಕೆ ಹಣ್ಣು, ಜವನಗಳನ್ನು ಅರ್ಪಿಸಿ ದೇವರ ದರ್ಶನ ಪಡೆದು ಭಕ್ತರು ಪುನೀತರಾದರು.
ಗ್ರಾಮದ ಮತ್ತೊಂದು ಬೆಟ್ಟದ ತುದಿಯಲ್ಲಿ (ದೊಡ್ಡಬೆಟ್ಟ) ನೆಲೆಗೊಂಡಿರುವ ಶ್ರೀಕಂಬದನರಸಿಂಹಸ್ವಾಮಿ ಬೆಟ್ಟದಲ್ಲೂ ಸಹಸ್ರಾರು ಭಕ್ತರು ಪೂಜೆ ಸಲ್ಲಿಸಿದರು. ರಥೋತ್ಸವದ ನಿಮಿತ್ತ ಕಳೆದ ಒಂದು ವಾರದಿಂದ ದನಗಳ ಜಾತ್ರೆಯೂ ನಡೆಯಿತು.