

ಶ್ರೀರಂಗಪಟ್ಟಣ: ಕಾವೇರಿ ನೀರು ಹಂಚಿಕೆಯಂತಹ ಗಂಭೀರ ವಿಚಾರವನ್ನು ಲಘುವಾಗಿ ಪರಿಗಣಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧತೆ ಮೆರೆಯದೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಗೆಪಾಟಲಿಗೆ ಈಡಾಗಿದೆ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಲೇವಡಿ ಮಾಡಿದರು.
ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಗುರುವಾರ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ರಾಜ್ಯ ಸರ್ಕಾರದ ನಡೆಗಳನ್ನು ಸಾಲು ಸಾಲಾಗಿ ಹಾಸ್ಯಾಸ್ಪದವಾಗಿ ಬಿಂಬಿಸಿ ನಗುವ ಮೂಲಕ ವಿನೂತನ ಚಳವಳಿ ನಡೆಸಿದರು. ಕರ್ನಾಟಕದ ರೈತರು ಹಾಗೂ 2 ಕೋಟಿ ಜನರ ಕುಡಿಯುವ ನೀರಿನ ಬವಣೆಯನ್ನು ನಿರ್ಲಕ್ಷೃ ಮಾಡಿ, ಈಗಾಗಲೇ ಕೆಆರ್‌ಎಸ್ ಜಲಾಶಯದಿಂದ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಈ ಮೂಲಕ ರಾಜ್ಯ ಸರ್ಕಾರ ತನ್ನ ಪ್ರಜೆಗಳನ್ನು ಕಾಪಾಡುವ ನೈತಿಕತೆ ಕಳೆದುಕೊಂಡಿದೆ ಎಂದರು.
ಕೆಆರ್‌ಎಸ್‌ನಿಂದ ನೀರು ಹರಿಸಬಾರದೆಂದು ಜನರು ಹೋರಾಟ ಮಾಡುತ್ತಿದ್ದಾರೆ. ಆದರೆ 5 ಸಾವಿರ ಬದಲಿಗೆ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕದ ವಿರುದ್ಧ ಆದೇಶ ನೀಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತುಂಬು ಹೃದಯದ ಧನ್ಯವಾದ ಸಲ್ಲಿಸಿದ ಏಕೈಕ ಅವಿವೇಕಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಎಂದು ಕಿಡಿಕಾರಿದರು.
ನಿದ್ರೆಯ ಮಂಪರಿನಲ್ಲಿರುವ ಸಿಎಂ ಸಿದ್ದರಾಮಯ್ಯ ಹಾಗೂ ಅಹಂಕಾರದ ನಶೆಯಲ್ಲಿರುವ ಡಿ.ಕೆ.ಶಿವಕುಮಾರ್ ನೀಡುತ್ತಿರುವ ದುರಾಡಳಿತ ರಾಜ್ಯದ ಜನರ ಪಾಲಿಗೆ ಮರಣ ಶಾಸನ ಬರೆದಿದ್ದು, ಜನರು ನಗುನಗುತ್ತಲೇ ಇವರಿಗೆ ಛೀಮಾರಿ ಹಾಕಬೇಕಿದೆ ಎಂದರು.
ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷರಾದ ಹನಿಯಂಬಾಡಿ ನಾಗರಾಜು, ಜಯರಾಮೇಗೌಡ, ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಪುಟ್ಟಮಾದು, ಸಂಚಾಲಕ ಹಳುವಳ್ಳಿ ನಾಗೇಂದ್ರ, ಸಂಘಟನಾ ಕಾರ್ಯದರ್ಶಿ ರಾಮಚಂದ್ರು, ಪದಾಧಿಕಾರಿಗಳಾದ ದರಸಗುಪ್ಪೆ ಸುರೇಶ್, ಮಾರಸಿಂಗನಹಳ್ಳಿ ಚಿಕ್ಕತಿಮ್ಮೇಗೌಡ, ಸಿದ್ದಪ್ಪ, ಹೆಮ್ಮಿಗೆ ಕೃಷ್ಣ, ಬೆಳಗೊಳ ಸುನೀಲ್, ಕಡತನಾಳು ಶ್ರೀಧರ್, ಬಾಬು ಚಾಮರಾಜು, ಬಲ್ಲೇನಹಳ್ಳಿ ಕೃಷ್ಣ, ಕುಮಾರ್ ಇತರರು ಹಾಜರಿದ್ದರು.