ಭೂಮಿತಾಯಿ ಹೋರಾಟ ಸಮಿತಿಯಿಂದ ಪತ್ರ ಚಳವಳಿ

SRP_26-01jpj
ಶ್ರೀರಂಗಪಟ್ಟಣದ ಕೇಂದ್ರ ಪ್ರಧಾನ ಅಂಚೇಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು, ರೈತ ನಾಯಕ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ರಾಷ್ಟ್ರಪತಿಗಳಿಗೆ ಕಾವೇರಿ ವಿಚಾರದಲ್ಲಿ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿ ದೆಹಲಿಗೆ ಪತ್ರ ರವಾನಿಸಿದರು.
Published on

ಶ್ರೀರಂಗಪಟ್ಟಣ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಮಂಡಳಿ ರಚನೆಯಾಗಿರುವುದು ಕಾನೂನು ವಿರುದ್ಧವಾಗಿದ್ದು, ಇಲ್ಲಿ ತಮಿಳುನಾಡು ಪರ ಏಕಪಕ್ಷೀಯವಾಗಿ ನೀಡುತ್ತಿರುವ ಆದೇಶಗಳ ಪರಾಮರ್ಶೆಗೆ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಬೇಕು ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಒತ್ತಾಯಿಸಿದರು.

ಪಟ್ಟಣದ ಕೇಂದ್ರ ಪ್ರಧಾನ ಅಂಚೆ ಕಚೇರಿಯಲ್ಲಿ ಮಂಗಳವಾರ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ನಡೆದ ಪತ್ರ ಚಳವಳಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನ್ಯಾಯ ಮಂಡಳಿ ರಚನೆ ಕಾನೂನು ನಿಯಾಮಳಿಯ ವ್ಯಾಪ್ತಿಗೆ ಒಳಪಡುವುದಿಲ್ಲ. ತಮಿಳುನಾಡು ಈ ನ್ಯಾಯ ಮಂಡಳಿಯಲ್ಲಿ ತಮ್ಮದೇ ಸದಸ್ಯರನ್ನು ಹೆಚ್ಚು ನೇಮಿಸಿಕೊಂಡು ಈ ಹಿಂದಿನಿಂದಲೂ ಕಾನೂನಿನ ಭಯ ಮೂಡಿಸಿ ಬರಗಾಲದಲ್ಲೂ ಹೆಚ್ಚುವರಿಯಾಗಿ ಕಾವೇರಿ ನೀರು ಪಡೆದು ಕರ್ನಾಟಕದ ಸ್ವಾಭಿಮಾನ, ಕಾವೇರಿ ಕಣಿವೆಯ ರೈತರ ಕೃಷಿ ಮತ್ತು ಜನ-ಜಾನುವಾರುಗಳ ಕುಡಿಯುವ ನೀರಿಗೂ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

ಕಾವೇರಿ ನೀರು ಕನ್ನಡಿಗರಿಗೆ ಸಿಗದಂತೆ ದಬ್ಬಾಳಿಕೆ ನಡೆಸುತ್ತಿರುವ ಪ್ರಾಧಿಕಾರ ಏಕಪಕ್ಷೀಯವಾಗಿ ತಮಿಳುನಾಡು ಪರ ನಿರಂತರ ಆದೇಶ ನೀಡಿ ದೌರ್ಜನ್ಯ ಎಸಗುತ್ತಿದೆ. ಹೀಗಾಗಿ ರಾಷ್ಟ್ರಪತಿಗಳು ರಾಷ್ಟ್ರದ ಸಂರಕ್ಷಣೆ ದೃಷ್ಠಿಯಿಂದ ತಮ್ಮದೇ ಒಂದು ಸಮಿತಿಯ ತಂಡ ರಚಿಸಿ ಕರ್ನಾಟಕದ ಕಾವೇರಿ ಜಲಾನಯನ ವ್ಯಾಪ್ತಿಯ ಜಲಾಶಯಗಳ ವಸ್ತುಸ್ಥಿತಿ ಪರಿಶೀಲಿಸಿ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಕ್ತ ವರದಿ ನೀಡುವ ಮೂಲಕ ಸಮಾನ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷರಾದ ಹನಿಯಂಬಾಡಿ ನಾಗರಾಜು, ಜಯರಾಮೇಗೌಡ, ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಪುಟ್ಟಮಾದು, ಸಂಚಾಲಕ ಹಳುವಳ್ಳಿ ನಾಗೇಂದ್ರ, ಸಂಘಟನಾ ಕಾರ್ಯದರ್ಶಿ ರಾಮಚಂದ್ರು, ಪದಾಧಿಕಾರಿಗಳಾದ ದರಸಗುಪ್ಪೆ ಸುರೇಶ್, ಮಾರಸಿಂಗನಹಳ್ಳಿ ಚಿಕ್ಕತಿಮ್ಮೇಗೌಡ, ಸಿದ್ದಪ್ಪ, ಹೆಮ್ಮಿಗೆ ಕೃಷ್ಣ, ಬೆಳಗೊಳ ಸುನೀಲ್, ಕಡತನಾಳು ಶ್ರೀಧರ್, ಬಾಬು ಚಾಮರಾಜು, ಬಲ್ಲೇನಹಳ್ಳಿ ಕೃಷ್ಣ, ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net