

ಶ್ರೀರಂಗಪಟ್ಟಣ: ವಕ್ಫ್ ವಿರುದ್ಧ ಸೋಮವಾರ ರೈತ ಹಿತರಕ್ಷಣಾ ವೇದಿಕೆ ಕರೆ ನೀಡಿದ್ದ ಶ್ರೀರಂಗಪಟ್ಟಣ ಬಂದ್ ಯಶಸ್ವಿಯಾಗಿದ್ದು, ಕ್ಷೇತ್ರದ ಜನರು ತಮ್ಮ ಜಾನುವಾರುಗಳೊಂದಿಗೆ ಬೀದಿಗಿಳಿದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.
ಪಟ್ಟಣದಲ್ಲಿ ಹಾಲಿನ ಕೇಂದ್ರಗಳು, ಜನೌಷಧಿ ಅಂಗಡಿಗಳು ಹೊರತುಪಡಿಸಿ ಉಳಿದೆಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಂಜಾನೆ 6 ರಿಂದಲೇ ತೆರೆಯದೆ ವರ್ತಕರು ಬಂದ್‌ಗೆ ಸಂಪೂರ್ಣ ಸಹಕಾರ ನೀಡಿದರು. ಪ್ಯಾಸೆಂಜರ್ ಆಟೋ ಚಾಲಕರು ಮತ್ತು ಮಾಲೀಕರು, ಗೂಡ್ಸ್ ಟೆಂಪೋ, ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘ ತಮ್ಮ ವಾಹನಗಳನ್ನು ರಸ್ತೆಗಳಿಸದ ಪರಿಣಾಮ ಶ್ರೀರಂಗಪಟ್ಟಣ ಸಂಪೂರ್ಣ ಸ್ತಬ್ಧಗೊಂಡಿತ್ತು.
ಪಟ್ಟಣದಲ್ಲಿ ಪ್ರತಿಭಟನಾಕಾರರು ಸೋಮವಾರ ಮುಂಜಾನೆಯಿಂದ ಆಟೋಗಳಲ್ಲಿ ಧ್ವನಿವರ್ಧಕಗಳ ಮೂಲಕ ಬಂದ್ ಸಹಕರಿಸುವಂತೆ ಮನವಿ ಮಾಡಿದ್ದ ಪರಿಣಾಮ ಅತಿಹೆಚ್ಚು ಜನದಟ್ಟಣೆ ಹಾಗೂ ವ್ಯವಹಾರ ಚಟುವಟಿಕೆಗಳು ಕಂಡುಬರುವ ಖಾಸಗಿ ಬಸ್ ನಿಲ್ದಾಣದಲ್ಲಿ ಹೋಟೆಲ್‌ಗಳು, ಟೀ ಅಂಗಡಿಗಳು, ಬೇಕರಿಗಳು ಮುಚ್ಚಿದ್ದವು. ಸದಾ ಗಿಜಿಗುಡುತ್ತಿದ್ದ ಬೀದಿಬದಿ ಹಣ್ಣು, ತರಕಾರಿ ಮತ್ತು ಹೂವಿನ ವ್ಯಾಪಾರಿಗಳು ತಮ್ಮ ನಿತ್ಯದ ವ್ಯವಹಾರ ಸ್ಥಗಿತಗೊಳಿಸಿದ್ದರಿಂದ ರಸ್ತೆಗಳೆಲ್ಲವೂ ಭಣಗಡುತ್ತಿದ್ದವು.
ಪಟ್ಟಣದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಶಾಲಾ-ಕಾಲೇಜುಗಳು ಬಂದ್ ಆಗಿದ್ದವು. ಸಣ್ಣಪುಟ್ಟ ಕಾರ್ಖಾನೆಗಳು ಸೇರಿದಂತೆ ಶ್ರೀರಂಗಪಟ್ಟಣ, ಕಿರಂಗೂರು ಹಾಗೂ ಕೆ.ಶೆಟ್ಟಹಳ್ಳಿ ಸಮೀಪದಲ್ಲಿನ ಗಾರ್ಮೆಂಟ್ಸ್ ಬಂದ್ ಮಾಡಲಾಗಿತ್ತು. ಪಟ್ಟಣದಲ್ಲಿ ಖಾಸಗಿ, ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ತಮ್ಮ ಚಟುವಟಿಕೆಗಳನ್ನು ತಮ್ಮ ಆಡಳಿತ ವ್ಯಾಪ್ತಿಗಷ್ಟೆ ನಡೆಸಿ, ಬಾಗಿಲು ಬಂದ್ ಮಾಡಿ ಸಹಕಾರ ನೀಡಿದವು. ಬಂದ್ ನಡುವೆಯೂ ಪಟ್ಟಣದ ಐತಿಹಾಸಿಕ ದೇವಾಲಯಗಳು ಹಾಗೂ ಪ್ರಮುಖ ಪ್ರವಾಸಿ ತಾಣಗಳಲ್ಲಿ ಭಕ್ತರು ಮತ್ತು ಪ್ರವಾಸಿಗರು ಕಂಡುಬಂದರು.