

ವಿಜಯವಾಣಿ ಸುದ್ದಿಜಾಲ ಗದಗ
ಐಎನ್ಡಿಐಎ ಮೆಚ್ಚಿಸಲು ರಾಜ್ಯದ ಮುಖ್ಯಂತ್ರಿ ತಮಿಳುನಾಡಿಗೆ ನೀರು ಹರಿಸಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹೇಳಿದರು.
ನಗರದಲ್ಲಿ ಶ್ರಿರಾಮುಲು ಜತೆ ಶನಿವಾರ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ತಮಿಳು ನಾಡಿನ ಸ್ಟಾ ಲಿನ್ ಮೆಚ್ಚಿಸಲು ರಾಜ್ಯದ ಜನತೆಗೆ ನೀರು ಇಲ್ಲದಂತೆ ಕಾಂಗ್ರೆಸ್ ಸರ್ಕಾರ ಮಾಡಿದೆ. ಕಾವೇರಿ ನೀರನ್ನೆಲ್ಲ ತಮಿಳುನಾಡಿಗೆ ಹರಿಸಿದ್ದಾರೆ ಎಂದು ಆರೋಪಿಸಿದರು. ಬರ ನಿರ್ವಹಣೆಗೆ ತಕ್ಷಣವೇ 3 ಸಾವಿರ ಕೋಟಿ ರೂ. ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲೆಯ ಬರ ಪರಿಸ್ಥಿತಿ ವೀಕ್ಷಣೆ ಮಾಡಲಾಗಿದೆ. ರಾಜ್ಯದ ಎಲ್ಲೆಡೆಯೂ ಇದೇ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ತಮ್ಮ ಕರ್ತವ್ಯವನ್ನು ಪರಿಣಾಮಕಾರಿ ಆಗಿ ನಿರ್ವಹಿಸುವ ಬದಲಾಗಿದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದರಲ್ಲೇ ಕಾಲ ಹರಣ ಮಾಡುತ್ತಿದ್ದಾರೆ ಎಂದು ಸಿ.ಸಿ. ಪಾಟೀಲ ಆರೋಪಿಸಿದರು.
ಕಾಂಗ್ರೆಸ್ಸಿಗೆ ಬಸ್ಮಾಸುರನ ಶಕ್ತಿ:
ರಾಜ್ಯದಲ್ಲಿ 136 ಸ್ಥಾನಗಳನ್ನು ಗೆದ್ದಿರುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಭಸ್ಮಾಸುರನಿಗೆ ಶಕ್ತಿ ಬಂದಂತೆ ಆಗಿದೆ. ಕಾಂಗ್ರೆಸ್ ನಾಯಕರು ಅಧಿಕಾರದ ಮದದಲ್ಲಿ ಮೆರೆಯುತ್ತಿದ್ದಾರೆ. ನವಲಗುಂದ ಶಾಸಕ ಕೋನರೆಡ್ಡಿ ಮಾಜಿ ಸಿಎಂ ಬೊಮ್ಮಾಯಿ ಬಗ್ಗೆ ಕ್ಷುಲ್ಲಕ ಮಾತನಾಡಿದ್ದು ಖಂಡನೀಯ. ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಸಾಧ್ಯವಾಗರಿವುದಕ್ಕೆ ಬೊಮ್ಮಾಯಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಕೀಳು ಪದ ಪ್ರಯೋಗ ಮಾಡಿದ್ದಾರೆ ಎಂದು ಕಿಡಿಕಾರಿದರು.
ವಿದ್ಯುತ್ ಸಮಸ್ಯೆ ಎದುರಾಗಿ, ಕಲ್ಲಿದ್ದಲು ಖರೀದಿಸಲು ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಗುತ್ತಿಗೆದಾರರ ಬಿಲ್ ಪಾವತಿ ಆಗುತ್ತಿಲ್ಲ. ಜಿಲ್ಲೆಗೆ ಕೇವಲ 10 ಕೋಟಿ ಪರಿಹಾರ ಬಿಡುಗಡೆ ಮಾಡಲಾಗಿದೆ. ಸರ್ಕಾರ ಸಂರ್ಪೂಣ ಕೋಮಾವಸ್ಥೆಯಲ್ಲಿದೆ ಎಂದು ಟೀಕಿಸಿದರು.
ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ವಿರೋಧ ಪಕ್ಷದ ಸ್ಥಾನದಲ್ಲಿದ್ದುಕೊಂಡು ಸರ್ಕಾರವನ್ನು ಎಚ್ಚರಿಸುವುದು ನಮ್ಮ ಕರ್ತವ್ಯ. ವಿಧಾನಸಭೆ ಮತ್ತು ವಿಧಾನ ಪರಿಷತ್ನಲ್ಲಿ ರೈತರ ಸಂಕಷ್ಟದ ಬಗ್ಗೆ ನಮ್ಮ ಪಕ್ಷದ ಶಾಸಕರು ಅಧಿವೇಶನದಲ್ಲಿ ಧ್ವನಿ ಎತ್ತಲಿದ್ದಾರೆ. ರೈತರಿಗೆ ಕೊಡುತ್ತಿದ್ದ 4 ಸಾವಿರ ಹಣಕ್ಕೂ ಕತ್ತರಿ ಬಿದ್ದಿದೆ. ವಿದ್ಯಾಥಿರ್ ವೇತನ ಬಿಡುಗಡೆ ಮಾಡಲು ಹಣವಿಲ್ಲ. ಬಿಸಿಯೂಟಕ್ಕೆ ತರಕಾರಿ ತರಲು ಹಣ ಇಲ್ಲದಂತೆ ಆಗಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಮಾಜಿ ಶಾಸಕ ಕಳಕಪ್ಪ ಬಂಡಿ, ಶ್ರೀಪತಿ ಉಡುಪಿ, ಕಾಂತಿಲಾಲ ಬನ್ಸಾಲಿ ಇದ್ದರು.