ಬಿಜೆಪಿಯವರ ಕಾಟಕ್ಕೆ ಓಡಿ ಹೋದ ಶ್ರೀರಾಮ: ಮಧು ಬಂಗಾರಪ್ಪ ವ್ಯಂಗ್ಯ

minister madhu bangarappa
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
Published on

ಶಿವಮೊಗ್ಗ: ಬಿಜೆಪಿಯವರ ಕಾಟಕ್ಕೆ ಅಯೋಧ್ಯೆಯಲ್ಲಿನ ಶ್ರೀರಾಮನೂ ಓಡಿ ಹೋಗುತ್ತಾನೆ. ಹಾಗಾಗಿ ರಾಮನೇ ಒಳಗಡೆ ಬೀಗ ಹಾಕಿಕೊಂಡು ಕೂತಿದ್ದಾನೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ರಾಮನ ವಿಷಯವೇ ತಿರುಗುಬಾಣ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.

ರಾಷ್ಟ್ರೀಯ ಹೆದ್ದಾರಿಗಳು ಪೂರ್ಣಗೊಳ್ಳದಿರುವುದು, ಹಕ್ಕುಪತ್ರ ನೀಡದಿರುವುದು, 40 ಪರ್ಸೆಂಟ್ ಕಮೀಷನ್ ಪಡೆದಿರುವುದು, ದುರಾಡಳಿತ ಮತ್ತು ದುರಂಕಾರವೇ ಬಿಜೆಪಿಗೆ ಮುಳುವಾಗಲಿವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹಿಂದುತ್ವದ ವಿಚಾರ ಎನ್ನುವ ಬಿಜೆಪಿಯವರು ಶಿವಮೊಗ್ಗದಲ್ಲಿ ಆದ ಹರ್ಷನ ಕೊಲೆ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ. ರಾಗಿಗುಡ್ಡದಲ್ಲಿ ಸಣ್ಣ ವಿಚಾರವನ್ನು ಮುಂದಿಟ್ಟುಕೊಂಡು ಬೆಂಕಿ ಹಚ್ಚಲು ಯತ್ನಿಸಿದರು. ಕಳೆದ 10 ವರ್ಷದಲ್ಲಿ ಶಿವಮೊಗ್ಗಕ್ಕೆ ಆಗಿರುವ ಅನ್ಯಾಯ ಸರಿಪಡಿಸಲಿಲ್ಲ ಎಂದರು.
ಜನರ ಬೆವರಿನ ತೆರಿಗೆ ಹಣದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಶಿವಮೊಗ್ಗ ಸ್ಮಾರ್ಟ್‌ಸಿಟಿಗೂ ರಾಜ್ಯ ಸರ್ಕಾರದ ಶೇ.50ರಷ್ಟು ಪಾಲಿದೆ. ಎಲ್ಲವನ್ನೂ ಕೇಂದ್ರ ಸರ್ಕಾರವೇ ನೀಡಿಲ್ಲ. ಶಿವಮೊಗ್ಗದಲ್ಲಿ ಆಗಿರುವ ಸ್ಮಾರ್ಟ್‌ಸಿಟಿ ಅವ್ಯವಹಾರ ತನಿಖೆಗೆ ಕೊಡುತ್ತೆವೆ. ಅದನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕಾನೂನಿನ ಕೆಲ ಪ್ರಕ್ರಿಯೆಗಳಿದ್ದು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜತೆಗೂ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಕಡಿಮೆ ಸೀಟು ಬಂದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂಬುದು ಸುಳ್ಳು. ಗ್ಯಾರಂಟಿ ನಿಲ್ಲಿಸುತ್ತೇವೆ ಎನ್ನುವುದು ತಪ್ಪು ಕಲ್ಪನೆ. ನಮ್ಮ ಪಕ್ಷದವರೇ ಆ ರೀತಿ ಬೆದರಿಸುತ್ತಿದ್ದರೆ ಪಕ್ಷದಿಂದಲೇ ಹೊರಗೆ ಹಾಕುತ್ತೇವೆ. ಗ್ಯಾರಂಟಿಗಳು ಐದು ವರ್ಷವೂ ಇರಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸಚಿವರು ಭರವಸೆ ನೀಡಿದರು.
10 ವರ್ಷ ಶಿವಮೊಗ್ಗದಲ್ಲಿ ಏನು ಅಭಿವೃದ್ಧಿ ಆಗಿದೆ. ವಿಐಎಸ್‌ಎಲ್ ಉಳಿಸುವ ಸಲುವಾಗಿ ಗೀತಾ ಸ್ಪರ್ಧೆ ಮಾಡಿದ್ದಾರೆ. ಶಿವಮೊಗ್ಗದ ಜನ ಗೀತಾ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತಾರೆ. ಈ ಬಾರಿ ಚುನಾವಣೆ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿದೆ ಎಂದರು. ಕೆಪಿಸಿಸಿ ವಕ್ತಾರ ಅನಿಲ್ಕುಮಾರ್ ತಡಕಲ್, ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಪ್ರಮುಖರಾದ ಜಿ.ಪದ್ಮನಾಭ, ಶಿ.ಜು.ಪಾಶಾ, ಜಿ.ಡಿ.ಮಂಜುನಾಥ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net