ದೇವರ ಸೇವೆಗೆಂದೇ ಜನ್ಮತಳೆದವರು ನಾವು...

Kalyanothsava-1
Published on

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

ಶ್ರೀನಿವಾಸ ಕಲ್ಯಾಣ ಮಹೋತ್ಸವಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ನಾವೆಲ್ಲರೂ ದೇವರ ದಾಸರು. ದೇವರ ಸೇವೆಗಾಗಿಯೇ ಜನ್ಮತಳೆದವರು. ಈ ಭಾವನೆ ಎಲ್ಲರಲ್ಲೂ ಮೂಡಿದರೆ ನಮ್ಮ ಸಮಾಜ ಸುಸ್ಥಿತಿಯಲ್ಲಿರಲು ಸಾಧ್ಯ. ದಾಸತ್ವದ ಅನುಸಂಧಾನದಿಂದ, ನಿಸ್ವಾರ್ಥದ ದೇವರ ಸೇವೆ ಹಾಗೂ ನಮ್ಮ ಕರ್ತವ್ಯ ನಿರ್ವಹಿಸಿದರೆ ಜಗತ್ತಿಗೇ ಮಂಗಲವಾಗುತ್ತದೆ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ರಾಜಾಂಗಣದಲ್ಲಿ ವಾದಿರಾಜ ಸಂಶೋಧನಾ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಶ್ರೀ ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವದ ನಿಮಿತ್ತ ಆಯೋಜಿಸಿರುವ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಶ್ರೀನಿವಾಸ ಕಲ್ಯಾಣ ಮಹೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಅಹಂಕಾರದಿಂದ ಅನರ್ಥ

ವಿಶ್ವದಲ್ಲಿ ಕಂಡುಬರುವ ಎಲ್ಲ ಅನರ್ಥಗಳಿಗೂ ಅಹಂಕಾರವೇ ಕಾರಣವಾಗಿದೆ. ನಾನು ದಾಸನಲ್ಲ, ನಾನೇ ಈಶ, ನಾನೇ ಶ್ರೇಷ್ಠ ಎಂಬ ಭಾವದಿಂದ ಅನರ್ಥ ಘಟಿಸುತ್ತದೆ. ನಡೆದ ಯುದ್ಧಗಳ ವಿಮರ್ಶೆ ಮಾಡಿದರೆ ಅಲ್ಲಿಯೂ ಸಹ ಅಹಂಕಾರ ಕಂಡುಬರುತ್ತದೆ. ದುಯೋರ್ಧನನ ಅಹಂಕಾರದಿಂದಾಗಿಯೇ ಮಹಾಭಾರತ ಯುದ್ಧ ನಡೆಯಿತು. ಮನೆ-ಮನಗಳ ನಡುವೆ ಇಂದು ಬಿರುಕು ಮೂಡುತ್ತಿದೆ. ಇದಕ್ಕೆ ಇಂದಿನ ಶಿಕ್ಷಣ ವ್ಯವಸ್ಥೆಯೇ ಕಾರಣ. ನಾನೇ ಶ್ರೇಷ್ಠ ಎಂಬ ಶಿಕ್ಷಣ ಪದ್ಧತಿಯಿಂದಾಗಿ ಮಕ್ಕಳಲ್ಲಿ ಅಹಂಕಾರ ಭಾವ ಮೂಡುತ್ತಿದೆ. ಹೀಗಾಗಿ ಹರಿದಾಸರ ಸಂದೇಶ ಜಗತ್ತಿಗೆ ಯಾವತ್ತೂ ಬೇಕಾಗಿದೆ. ಅದೂ ಭಗವದ್ಗೀತೆಯ ಸಂದೇಶವೇ ಆಗಿದೆ. ಗೀತೆಯ ಸಂದೇಶವನ್ನು ಅವರು ಪ್ರತಿನಿಧಿಸುವುದರಿಂದ ಶ್ರೀಕೃಷ್ಣನಿಗೂ ದಾಸರೆಂದರೆ ಬಲುಇಷ್ಟ ಎಂದರು.

UDP-10-3-Governor
ಉಡುಪಿಯ ಗೀತಾಮಂದಿರದಲ್ಲಿ ಮೇಘಾಲಯ ರಾಜ್ಯಪಾಲ ಸಿ.ಎಚ್​. ವಿಜಯಶಂಕರ್​ ಅವರು ಸುಗುಣೇಂದ್ರ ಶ್ರೀಗಳಿಂದ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದರು. ಮಠದ ದಿವಾನ ನಾಗರಾಜ ಆಚಾರ್ಯ, ಮಠದ ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಇದ್ದರು.

ಪೂಜಾ ಸಂಕಲ್ಪ

ದಾಸ ಸಾಹಿತ್ಯಕ್ಕೆ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಪಾಂಡುರಂಗ ರಾವ್​ ಕಂಪ್ಲಿ, ಸಂಜೀವ್​ ಗುಪ್ತಾ, ಕೆ.ಆರ್​. ಗುರುರಾಜ್​ ರಾವ್​ ಅವರು ಶ್ರೀನಿವಾಸ ಕಲ್ಯಾಣ ಮಹೋತ್ಸವದ ಸಂಕಲ್ಪ ಮಾಡಿದರು. ಸಮರ್ಥ ಆಚಾರ್ಯ ಹಾಗೂ ಶ್ರೀರಾಮ ಆಚಾರ್ಯ ವೈದಿಕ ಕೈಂಕರ್ಯ ನಡೆಸಿಕೊಟ್ಟರು. ಪುತ್ತಿಗೆ ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರು ಶ್ರೀನಿವಾಸನ ವಿಗ್ರಹಕ್ಕೆ ಮಹಾಭಿಷೇಕ ಕಾರ್ಯ ನೆರವೇರಿಸಿದರು. ಶ್ರೀನಿವಾಸ ಉತ್ಸವ ಬಳಗದ ಮುಖ್ಯಸ್ಥ ವಾದಿರಾಜ ಆಚಾರ್ಯ ತಾಯ್ಲೂರು ಹಾಗೂ ತಂಡದಿಂದ ಮಹೋತ್ಸವ ನಡೆಯಿತು.

ಡಾ. ರಾಯಚೂರು ಶೇಷಗಿರಿ ದಾಸ್​, ಶುಭಾ ಸಂತೋಷ್​ ಅವರು ವಿಜಯದಾಸರ ಕೃತಿಯ ಗಾಯನದಲ್ಲಿ ಹಿನ್ನೆಲೆಯಲ್ಲಿ ಉತ್ಸವ ನಡೆಯಿತು. ವಿದ್ವಾಂಸ ಡಾ. ಬಿ.ಗೋಪಾಲ ಆಚಾರ್ಯ ಅವರು ಸಂಭಾಷಣೆ, ವ್ಯಾಖ್ಯಾನದೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

ಮಠದ ದಿವಾನ ನಾಗಾರಾಜ ಆಚಾರ್ಯ, ಮಠದ ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​, ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಮಹಿತೋಷ್​ ಆಚಾರ್ಯ, ಪಂ.ಮುದ್ದು ಮೋಹನ್​ ಇತರರಿದ್ದರು.

ಮೇಘಾಲಯ ರಾಜ್ಯಪಾಲ ಉಪಸ್ಥಿತಿ

Kalyanothsava-2
ಮೇಘಾಲಯದ ರಾಜ್ಯಪಾಲ ಸಿ.ಎಚ್​. ವಿಜಯಶಂಕರ್​ ಅವರಿಗೆ ಸುಗುಣೇಂದ್ರ ಶ್ರೀಗಳು ತಿರುಪತಿ ತಿರುಮಲನ ವಸ್ತ್ರವನ್ನು ಪೇಟವಾಗಿ ತೊಡಿಸಿದರು. ಸುಶ್ರೀಂದ್ರ ಶ್ರೀ, ಪ್ರಸನ್ನ ಆಚಾರ್ಯ, ಡಾ. ಬಿ.ಗೋಪಾಲ ಆಚಾರ್ಯ ಇತರರಿದ್ದರು.

ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಮೇಘಾಲಯದ ರಾಜ್ಯಪಾಲ ಸಿ.ಎಚ್​. ವಿಜಯಶಂಕರ್​ ಪಾಲ್ಗೊಂಡಿದ್ದರು. ತಿರುಪತಿ ದೇವಸ್ಥಾನದಿಂದ ಆಗಮಿಸಿದ್ದ ಶ್ರೀನಿವಾಸನ ವಸ್ತ್ರವನ್ನು ಪೇಟವಾಗಿಸಿ ಪುತ್ತಿಗೆ ಶ್ರೀಗಳು ರಾಜ್ಯಪಾಲರಿಗೆ ತೊಡಿಸಿ, ಉಡುಪಿ ಶ್ರೀಕೃಷ್ಣನ ಪ್ರಸಾದ ನೀಡಿದರು. ವಿಜಯದಾಸರ ಆರಾಧನೆಗೆ ವಿಜಯಶಂಕರರು ಆಗಮಿಸಿದ್ದಾರೆ. ಅವರು ಮೇಘಾಲಯದಿಂದ ಆಗಮಿಸಿದ್ದು, ಅದು ದೇವತೆಗಳು ನೆಲೆಸುವ ಕ್ಷೇತ್ರವಾಗಿದೆ. ಹರಿದಾಸರಿಗೆ ವಿಶೇಷವಾಗಿ ಒಲಿಯುವ ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಅವರಿಗೆ ಇನ್ನಷ್ಟು ಉನ್ನತ ಸ್ಥಾನ ಲಭಿಸುವಂತಾಗಲಿ ಎಂದು ಆಶೀರ್ವದಿಸಿದರು.

ಜಗತ್ತಿಗೆ ಸ್ಫೂರ್ತಿ ನೀಡಿದ ಭಜನೆ

ಸಮ್ಮೇಳನದ ಸಂಜೆ ಅವಧಿಯಲ್ಲಿ ಧರ್ಮಸ್ಥಳದ ಮಂಜುನಾಥೇಶ್ವರ ಭಜನಾ ಮಂಡಳಿಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಭಜನಾ ಮಂಡಳಿಗಳ ಸಮಾವೇಶ ಹಾಗೂ ವಿದುಷಿ ಉಷಾ ಹೆಬ್ಬಾರ್​ ತಂಡದಿಂದ ನಡೆದ ಸಹಸ್ರಕಂಠ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಸುಗುಣೇಂದ್ರ ಶ್ರೀ, ಸಹಸ್ರ ಸಂಖ್ಯೆಯಲ್ಲಿ ಹಾಡಿದ್ದೀರಿ. ಸಾಮೂಹಿಕವಾಗಿ ನರ್ತನ ಮಾಡಿದ್ದರಿಂದ ಶ್ರೀಕೃಷ್ಣ ಇಂದು ವಿಜಯ ವಿಠ್ಠಲ ರೂಪದಲ್ಲಿ ಬಂದು ನಮಗೆಲ್ಲ ಅನುಗ್ರಹಿಸಿದ್ದಾನೆ. ಅದೃಷ್ಯನಾಗಿ ದೇವರುಗಳು ಹಾಗೂ ಆನ್​ಲೈನ್​ ಮೂಲಕ ಜಗತ್ತಿನಾದ್ಯಂತ ಜನರು ಈ ಭಜನಾ ಸಂಕಿರ್ತನೆ ವೀಕ್ಷಿಸಿದ್ದಾರೆ. ಭಜನೆ ಇಂದು ಜಗತ್ತಿಗೆ ಸ್ಫೂರ್ತಿ ನೀಡಿದೆ. ನಮ್ಮ ಪರ್ಯಾಯ ಸೇವೆ ಮುಗಿದ ಬಳಿಕ ಅಮೆರಿಕದಲ್ಲಿರುವ ಮಠದ ಎಲ್ಲ ಶಾಖೆಯಲ್ಲೂ ಭಜನಾ ಸಂಕೀರ್ತನೆ ಸೇವೆಯನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲು ಸಂಕಲ್ಪ ಮಾಡಿದ್ದಾಗಿ ತಿಳಿಸಿದರು.

ಭಾರತವಾಗಬೇಕು ವಿಶ್ವಗುರು

ದೇಶದಲ್ಲಿ ಭಗವದ್ಗೀತೆ ಕ್ರಾಂತಿಯ ಛಾಯೆ ಕಾಣಿಸುತ್ತಿದೆ. ನಮ್ಮ ಕೋಟಿ ಗೀತಾ ಲೇಖನ ಯಜ್ಞಕ್ಕೆ ಅಭೂತಪೂರ್ವ ಸ್ಪಂದನೆ ಲಭಿಸಿತ್ತಿದೆ. ಆ ಮೂಲಕ ಇಡೀ ದೇಶ-ವಿಶ್ವದಲ್ಲಿ ಭಗವದ್ಗೀತೆಯ ಕ್ರಾಂತಿ ನಡೆದು ನಮ್ಮ ಭಾರತವು ವಿಶ್ವಗುರು ಆಗಬೇಕೆಂಬ ನೆಲೆಯಲ್ಲಿ ಗೀತಾ ಲೇಖನ ಯಜ್ಞ ಕಾರ್ಯ ಮಾಡಲಾಗುತ್ತಿದೆ. ಇದೇ ನ.20ರಿಂದ ಡಿ.24ರ ತನಕ ರಾಜಾಂಗಣದಲ್ಲಿ ಗೀತೋತ್ಸವ ಆಯೋಜಿಸಲಾಗಿದೆ ಎಂದು ಶ್ರೀಗಳು ಮಾಹಿತಿ ನೀಡಿದರು.

ಮಠದಿಂದ ಅನೇಕ ಯೋಜನೆ

ಭಗವದ್ಗೀತೆ ಕುರಿತ ಎಲ್ಲ ಕಾರ್ಯಕ್ರಮ, ಪ್ರಚಾರ, ಸ್ಫೂರ್ತಿಯಾಗಿ ಗೀತಾ ಮಂದಿರ ನಿರಂತರ ತೊಡಗಿಕೊಂಡಿದೆ. ಇಲ್ಲಿ ಕೃಷ್ಣನ ವಿಶ್ವರೂಪ ದರ್ಶನ ತೋರುವ ಪ್ಲಾನಿಟೋರಿಯಂ ನಿರ್ಮಿಸಲು ಯೋಜಿಸಲಾಗಿದೆ. ಅಲ್ಲದೆ, ತಂತ್ರಜ್ಞಾನದ ಮೂಲಕ ಕೃಷ್ಣ ಲೀಲೆಗಳನ್ನು ಸಾಕ್ಷಾತ್​ ಅನುಭವಿಸಲು ಕೃಷ್ಣ ಎಕ್ಸ್​ಪೀರಿಯನ್ಸ್​ ಸೆಂಟರ್​ ಕೂಡ ತೆರೆಯಲಾಗುತ್ತಿದೆ. ತಂತ್ರಜ್ಞಾನದ ಮೂಲಕವೂ ಭಕ್ತಿಯ ಪ್ರಸಾರ, ಪ್ರಚಾರ ಕಾರ್ಯ ಕೃಷ್ಣನ ಉಡುಪಿ ಕ್ಷೇತ್ರದಿಂದ ನಡೆಯಬೇಕೆಂಬ ಉದ್ದೇಶದಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುಗುಣೇಂದ್ರ ಶ್ರೀ ತಿಳಿಸಿದರು.

ಸಮಾವೇಶ ಉದ್ಘಾಟನೆ

ಮಠದ ದಿವಾನ ನಾಗರಾಜ ಆಚಾರ್ಯ ಭಜನಾ ಮಂಡಳಿ ಸಮಾವೇಶ ಉದ್ಘಾಟಿಸಿ ಶುಭ ಹಾರೈಸಿದರು.
Bhajana-1
ರಾಜಾಂಗಣದಲ್ಲಿ ಧರ್ಮಸ್ಥಳದ ಮಂಜುನಾಥೇಶ್ವರ ಭಜನಾ ಮಂಡಳಿಗಳ ಒಕ್ಕೂಟದ ನೇತೃತ್ವದಲ್ಲಿ ಸಹಸ್ರಕಂಠ ಗಾಯನ ನಡೆಯಿತು.

ಮಠದ ದಿವಾನ ನಾಗರಾಜ ಆಚಾರ್ಯ ಭಜನಾ ಮಂಡಳಿ ಸಮಾವೇಶ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್​ ಉಡುಪಿ ತಾಲೂಕಾಧ್ಯಕ್ಷ ವಿಜಯ ಶೆಟ್ಟಿ ಕೊಂಡಾಳಿ, ಪ್ರ.ಕಾರ್ಯದರ್ಶಿ ಶಿವಕುಮಾರ್​ ಅಂಬಲಪಾಡಿ, ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು, ಪರಿಷತ್​ನ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಪಿ., ಧ.ಗ್ರಾ. ಯೋಜನೆಯ ಉಡುಪಿ ತಾಲೂಕು ಅಧಿಕಾರಿ  ರಾಮಾ ಎಂ., ಭಜನಾ ಪರಿಷತ್ ಉಪಾಧ್ಯಕ್ಷರಾದ ವಜ್ರಾಕ್ಷಿ ಪಿ. ದಾಸ್, ಸುಮಿತ್ರಾ ನಾಯ್ಕ್, ಜತೆ ಕಾರ್ಯದರ್ಶಿ ಸತೀಶಕುಮಾರ್ ಕೇದಾರ್, ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ವಲಯ ಸಂಯೋಜಕಿಯರಾದ ಯಶೋದಾ, ಆಶಾ ಕೆಮ್ಮಣ್ಣು, ಯೋಜನೆಯ ವಲಯ ಮೇಲ್ವಿಚಾರಕಿಯರಾದ ಪವಿತ್ರಾ, ಪ್ರೇಮಾ ಸಹಿತ ಭಜನಾ ಪರಿಷತ್ ಸಮಿತಿ ಸದಸ್ಯರು, ವಿವಿಧ ಭಜನಾ ಮಂಡಳಿಗಳ ಸದಸ್ಯರು ಇದ್ದರು.

'ಸಂಕೀರ್ತನ' ಚಿತ್ರದ ತುಣುಕು​ ಬಿಡುಗಡೆ

ಕುಟುಂಬದವರು ಕುಳಿತು ನೋಡಲು ಸಾಧ್ಯವಿಲ್ಲದಂತಹ ಚಲನಚಿತ್ರಗಳೇ ಬಿಡುಗಡೆ ಆಗುತ್ತಿರುವಾಗ ಭಕ್ತಿ ಪ್ರಧಾನ ಹಾಗೂ ದಾಸರ ಶ್ರೇಷ್ಠತೆ ಕುರಿತು ಮಾಹಿತಿ ನೀಡುತ್ತಿರುವ 'ಸಂಕೀರ್ತನ' ಸಿನಿಮಾ ಸಿದ್ಧಗೊಳ್ಳುತ್ತಿರುವುದು ಅತೀವ ಸಂತಸ ತಂದಿದೆ ಎಂದು ಚಿತ್ರದ ತುಣುಕು​ ಬಿಡುಗಡೆ ಮಾಡಿದ ಸುಗುಣೇಂದ್ರ ಶ್ರೀ ತಿಳಿಸಿದರು. ಚಿತ್ರದ ನಿರ್ದೇಶಕ ಡಿ.ಎಸ್​. ಮಂಜುನಾಥ್​. ಕಲೆ, ವಸ್ತ್ರವಿನ್ಯಾಸ ಹಾಗೂ ನಿರ್ಮಾಪಕಿ ಕೆ.ಪದ್ಮಕಲಾ ಗುಂಡುರಾವ್​, ಚಿತ್ರಕಥೆ, ಸಂಭಾಷಣೆ ಬರೆದ ಜೆ.ಎಂ. ಪ್ರಲ್ಹಾದ್​, ಸಂಗೀತ ನಿರ್ದೇಶಕ ಪ್ರವೀಣ್​ ಡಿ. ರಾವ್​, ಕಾರ್ಯಕಾರಿ ನಿರ್ಮಾಪಕ ವಿಜಯ ಭಾಸ್ಕರ್​ ಉಪಸ್ಥಿತರಿದ್ದರು. ವಿಜಯ ನಗರ ಸಾಮ್ರಾಜ್ಯದ ಸುವರ್ಣ ಯುಗದ ಸಂತ ಸಮಾಗಮ ಎಂಬ ದೃಷ್ಟಿಕೋನದಲ್ಲಿ ಈ ಚಿತ್ರ ತಯಾರಿಸಲಾಗಿದೆ ಎಂದು ಸಾಫಲ್ಯ ಮೂವೀಸ್​ ಚಿತ್ರತಂಡ ಮಾಹಿತಿ ನೀಡಿತು. ಡಾ. ಬಿ.ಗೋಪಾಲ ಆಚಾರ್ಯ ನಿರೂಪಿಸಿದರು.

Bhajana-3
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net