ರಾಜಕೀಯಕ್ಕೆ ಮೊದಲ ಮೆಟ್ಟಿಲು ಹಾಕಿಕೊಟ್ಟಿದ್ದ ಪ್ರಸಾದ್

HUN-MAY-7-1(CONG MEETING)
ಹುಣಸೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಎಚ್.ಪಿ.ಮಂಜುನಾಥ್, ರಮೇಶ್, ಚಿಕ್ಕಸ್ವಾಮಿ, ಹರಿಹರ ಆನಂದಸ್ವಾಮಿ ಇತರರಿದ್ದರು.
Published on

ಹುಣಸೂರು: ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಅಡಗೂರು ಎಚ್.ವಿಶ್ವನಾಥ್ ನನ್ನ ರಾಜಕೀಯ ಜೀವನಕ್ಕೆ ಮೊದಲ ಮೆಟ್ಟಿಲು ಹಾಕಿಕೊಟ್ಟ ಮಹನೀಯರಾಗಿದ್ದಾರೆ ಎಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ವಿ.ಶ್ರೀನಿವಾಸ್‌ಪ್ರಸಾದ್ ಸ್ಮರಣಾರ್ಥ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಮೊದಲ ಹೆಜ್ಜೆಯಲ್ಲಿ ಅವರ ದೊಡ್ಡ ಕೊಡುಗೆ ಇದೆ. ಮೊದಲ ಸಲ ಕಾಂಗ್ರೆಸ್ ಟಿಕೆಟ್ ದೊರೆಯಲು ಕಾರಣರು. ಹುಣಸೂರಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದ ಶ್ರೀನಿವಾಸಪ್ರಸಾದ ಅವರು ನನ್ನ ಮೊದಲ ಚುನಾವಣೆ ವೇಳೆ ಸಿದ್ದರಾಮಯ್ಯ ಅವರನ್ನು ಹುಣಸೂರಿಗೆ ಸ್ವತಃ ಕರೆತಂದು ನನ್ನ ಪರ ಪ್ರಚಾರ ನಡೆಸಿ ಗೆಲುವಿಗೆ ಕಾರಣರಾಗಿದ್ದರು ಎಂದರು.

ಶ್ರೀನಿವಾಸಪ್ರಸಾದ್ ತಮಗೆ ಸಿಕ್ಕ ಅಧಿಕಾರದ ಅವಧಿಯಲ್ಲಿ ದಮನಿತರು, ಬಡವರ ಪರವಾಗಿ ಕೆಲಸ ಮಾಡಿ ಸೈ ಎನಿಸಿಕೊಂಡವರು. ಯುವ ರಾಜಕಾರಣಿಗಳನ್ನು ಬೆಳೆಸಿ, ಅಧಿಕಾರ ಕಲ್ಪಿಸಿಕೊಟ್ಟವರು. ನೇರ, ನಿಷ್ಟುರವಾದಿ, ಸದಾ ನ್ಯಾಯದ ಪರವಾಗಿ ರಾಜಕಾರಣ ನಡೆಸಿದ ವಿ.ಶ್ರೀನಿವಾಸ್‌ಪ್ರಸಾದ ಅವರು ಸಜ್ಜನ ರಾಜಕಾರಣಿ ಎಂದು ಸ್ಮರಿಸಿದರು.

ಶ್ರೀನಿವಾಸ್‌ಪ್ರಸಾದ್ ಅವರ ಸಹೋದರ ವಿ.ರಾಮಸ್ವಾಮಿ ಮಾತನಾಡಿ, ಶ್ರೀನಿವಾಸಪ್ರಸಾದ್ ಹುಣಸೂರಿನೊಂದಿಗೆ ಅದರಲ್ಲೂ ಮಂಜುನಾಥ್ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಕೊನೆತನಕವೂ ಸ್ವಾಭಿಮಾನಿಯಾಗಿದ್ದರು ಎಂದರು.

ಮುಖಂಡರಾದ ಹರಿಹರ ಆನಂದಸ್ವಾಮಿ, ಡಿ.ಕೆ.ಕುನ್ನೇಗೌಡ, ಹಂದನಹಳ್ಳಿ ಸೋಮಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ರವಿಗೌಡ, ಅಣ್ಣಯ್ಯನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣ್, ಕಾರ್ಯಾಧ್ಯಕ್ಷ ವಕೀಲ ಪುಟ್ಟರಾಜು, ಎಸ್.ಜಯರಾಂ ಮಾತನಾಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಕಲ್ಕುಣಿಕೆ ರಮೇಶ್, ಪ್ರೇಮಕುಮಾರ್, ಮುಖಂಡರಾದ ಬಿಳಿಕೆರೆ ಬಸವರಾಜು, ಎ.ಪಿ.ಸ್ವಾಮಿ, ಶಿರೇನಹಳ್ಳಿ ಬಸವರಾಜೇಗೌಡ, ಚಿಕ್ಕಸ್ವಾಮಿ, ಕೆಂಪೇಗೌಡ ಯುವ ಪಡೆ ಅಧ್ಯಕ್ಷ ಮೀನುಮನೆ ಪಾಂಡುಕುಮಾರ್, ಕಲ್ಕುಣಿಕೆ ರಾಘು, ಹಗರನಹಳ್ಳಿ ಕುಮಾರ್, ಕಲ್ಕುಣಿಕೆ ಶ್ರೀನಿವಾಸ್, ಜಾಕೀರ್‌ಹುಸೇನ್, ಶಾಂತಾ ರಮೇಶ್, ಕಲ್ಪನಾ, ಸುಮತಿ, ನೇತ್ರಾ, ರೇಣುಕಾ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net