

ತಿ.ನರಸೀಪುರ: ದಲಿತ ಸಮುದಾಯದ ಹಕ್ಕು ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಿಡಿದೇಳುತ್ತಿದ್ದ ಏಕೈಕ ರಾಜಕಾರಣಿ ವಿ.ಶ್ರೀನಿವಾಸಪ್ರಸಾದ್ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ದಿವಂಗತ ವಿ.ಶ್ರೀನಿವಾಸಪ್ರಸಾದ್ ಅವರ ಪುಣ್ಯಾನುಮೋದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಲಿಂಗಪ್ಪ ಅವರ ನಂತರ ಶ್ರೀನಿವಾಸಪ್ರಸಾದ್ ದಲಿತರ ಹಕ್ಕು, ಸ್ವಾಭಿಮಾನದ ಧ್ವನಿಯಾದವರು. ದಲಿತರ ರಾಜಕಾರಣಕ್ಕೆ ಪ್ರಸಾದ್ ಅವರು ದಾರಿದೀಪ ಎಂದರು.
ರಾಜಕಾರಣಿಯಾಗಿ ದಲಿತ ಸಮುದಾಯದ ಪರವಾಗಿ ನಿಲ್ಲುವುದು, ಚುನಾವಣಾ ರಾಜಕಾರಣದಲ್ಲಿ ಸುಲಭವಲ್ಲ. ಮೇಲ್ವರ್ಗಗಳ ವಿರುದ್ಧ ಹೋರಾಡುತ್ತಲೇ ದಮನಿತರಿಗಾಗಿ ದುಡಿದ ಧೀಮಂತ ರಾಜಕಾರಣಿ. ಅವರು ನಮ್ಮನ್ನು ಅಗಲಿರುವುದು ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ. ಸ್ವಾಭಿಮಾನಕ್ಕೆ ಧಕ್ಕೆ ಉಂಟಾದರೆ ಅವರು ಪಕ್ಷವನ್ನೇ ಬಿಟ್ಟು ಹೊರಗೆ ಬರುತ್ತಿದ್ದರು. ಅವರು ಯಾವ ಪಕ್ಷಕ್ಕೆ ಬಂದರೂ ಆ ಭಾಗದಲ್ಲಿ ಆ ಪಕ್ಷದ ಶಾಸಕರು ಆಯ್ಕೆಯಾಗುತ್ತಿದ್ದರು. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣ ಮಾಡಿದ್ದಾರೆ ಎಂದು ಬಣ್ಣಿಸಿದರು.
ಬೋದಿರತ್ನ ಬಂತೇಜಿ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ಅವರು ಒಬ್ಬ ವ್ಯಕ್ತಿಯಾಗಿರಲಿಲ್ಲ. ಒಂದು ಶಕ್ತಿಯಾಗಿದ್ದರು. ಕಳೆದ 50 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಸಂಸದರಾಗಿ, ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವರಾಗಿ ರಾಜ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿ ಶೋಷಿತ ಹಾಗೂ ದಲಿತರ ಧ್ವನಿಯಾಗಿದ್ದರು ಎಂದು ಸ್ಮರಿಸಿದರು.
ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ಧಾರ್ಥ, ಡಾ.ರೇವಣ್ಣ, ತಾಪಂ ಮಾಜಿ ಸದಸ್ಯರಾದ ಎಂ.ರಮೇಶ್, ಎಂ.ಎಸ್.ಬಸವರಾಜು, ರಾಮಲಿಂಗಯ್ಯ, ನಿಲಸೋಗೆ ಬಸವರಾಜು, ತೋಟದಪ್ಪ ಬಸವರಾಜು, ಕುರುಬೂರು ವೀರೇಶ್, ಎಸ್ಸಿ, ಎಸ್ಟಿ ಹೋರಾಟ ಸಮಿತಿ ಸದಸ್ಯ ಮಹದೇವಸ್ವಾಮಿ, ಕು.ಶಿ.ಬೃಂಗೇಶ್, ಅಲಗೂಡು ಶಿವಕುಮಾರ್, ವಿಚಾರವಾದಿ ಕೆ.ಎನ್.ಪ್ರಭುಸ್ವಾಮಿ, ಮೂಗೂರು ಸಿದ್ದರಾಜು, ಸೋಸಲೆ ಶಶಿಕಾಂತ್, ಪರಶಿವಮೂರ್ತಿ, ನಿಂಗರಾಜು,ಶಿವಕುಮಾರ್ (ಬಡ್ದು),ಮೂಗೂರು ಕುಮಾರಸ್ವಾಮಿ, ಪುರಸಭಾ ಸದಸ್ಯ ಪ್ರಕಾಶ್, ತಾ.ಪಂ ಮಾಜಿ ಉಪಾಧ್ಯಕ್ಷ ಮರಯ್ಯ, ಕುಕ್ಕೂರು ರಾಜು, ಚೌಹಳ್ಳಿ ಸಿದ್ದರಾಜು,ಲಕ್ಷ್ಮಣ, ಬನ್ನಳ್ಳಿ ಹುಂಡಿ ಪುಟ್ಟಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಪಪಂ ಮಾಜಿ ಅಧ್ಯಕ್ಷ ಮಹದೇವಸ್ವಾಮಿ ಮತ್ತಿತರರಿದ್ದರು.