

ಉಡುಪಿ: ಜೀವನದಲ್ಲಿ ಸಜ್ಜನರ ಸಹವಾಸ ಅತೀ ಅಗತ್ಯ. ಇದರಿಂದ ಉತ್ತಮ ಮನುಷ್ಯರಾಗಲು ಸಾಧ್ಯ. ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರ ನೀಡಿದರೂ, ಸಜ್ಜನರ ಸಂಗವಿಲ್ಲದಿದ್ದರೆ ಪ್ರಯೋಜನವಿಲ್ಲ. ಹೀಗಾಗಿ ಒಳ್ಳೆಯ ಕೆಲಸಕ್ಕೆ ಪ್ರೇರಣೆ ನೀಡುವವರ ಸಂಪರ್ಕ ಬೆಳೆಸಿಕೊಳ್ಳಬೇಕು ಎಂದು ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.
ಕುಂಜಿಬೆಟ್ಟು ಶಾರದಾ ದೇವಸ್ಥಾನದಲ್ಲಿ ಶುಕ್ರವಾರ ಕುಂಭಾಭಿಷೇಕ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ದೇವರ ಸನ್ನಿಧಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಸೂಕ್ತ ಸಂದರ್ಭದಲ್ಲಿ ಅನುಗ್ರಹ ಪ್ರಾಪ್ತಿಯಾಗುತ್ತದೆ. ದೇವರಲ್ಲಿ ಕ್ಷುಲ್ಲಕ ವಿಷಯಗಳ ಬಗ್ಗೆ ಬೇಡಿಕೆ ಸಲ್ಲಿಸದೆ ಧರ್ಮ ಮಾರ್ಗದಲ್ಲಿ ಮುನ್ನಡೆಸುವಂತೆ ಪ್ರಾರ್ಥಿಸಬೇಕು. ಲೋಕದಲ್ಲಿ ಸಾಮಾನ್ಯ ಮತ್ತು ವಿಶೇಷ ಎಂಬ ಎರಡು ಬಗೆಯ ಧರ್ಮಗಳಿವೆ. ಪ್ರತಿಯೊಬ್ಬರೂ ಮಾಡಲೇ ಬೇಕಾಗಿರುವುದು ಸಾಮಾನ್ಯ ಧರ್ಮ. ಶಾಸ್ತ್ರ ವಿಹಿತ ಆಚರಣೆಗಳು ವಿಶೇಷ ಧರ್ಮ ಎಂದು ಪರಿಗಣಿತವಾಗಿದೆ. ಅಹಿಂಸೆ, ಸತ್ಯ ನುಡಿ, ಕಳ್ಳತನ ಮಾಡದಿರುವುದು, ಬಾಹ್ಯ ಮತ್ತು ಆಂತರಿಕ ಶುದ್ಧಿ, ಇಂದ್ರಿಯ ನಿಗ್ರಹ ಸಾಮಾನ್ಯ ಧರ್ಮಗಳಾಗಿವೆ. ಬ್ರಹ್ಮಚಾರಿ, ಗೃಹಸ್ಥ, ಸನ್ಯಾಸಿ, ಸ್ತ್ರೀಯರಿಗೆ ಶಾಸ್ತ್ರಗಳಲ್ಲಿ ಸೂಚಿತ ನಿಯಮಗಳು ವಿಶೇಷ ಧರ್ಮಗಳಾಗಿವೆ ಎಂದರು.
ಶೃಂಗೇರಿ ಮಠದ ಆಡಳಿತಾಧಿಕಾರಿ ಗೌರಿಶಂಕರ್, ಸ್ವಾಗತ ಸಮಿತಿ ಸಂಚಾಲಕ ವಿಶ್ವನಾಥ ಶ್ಯಾನುಭೋಗ್, ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷ ಮಂಜುನಾಥ್ ಹೆಬ್ಬಾರ್, ನಗರಸಭಾ ಸದಸ್ಯೆ ರಜನಿ ಹೆಬ್ಬಾರ್, ಸ್ಥಾನಿಕ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಯು.ಪ್ರಫುಲ್ಲಚಂದ್ರ ರಾವ್, ಉಪಾಧ್ಯಕ್ಷ ಡಾ.ವೈ.ಸುದರ್ಶನ ರಾವ್, ಕಾರ್ಯದರ್ಶಿ ಅರವಿಂದ ಕುಮಾರ್ ಉಪಸ್ಥಿತರಿದ್ದರು.
ಸ್ಥಾನಿಕ ಬ್ರಾಹ್ಮಣ ಸಂಘದ ವತಿಯಿಂದ ಶ್ರೀಗಳಿಗೆ ಭಿನ್ನವತ್ತಳೆ ಸಮರ್ಪಿಸಲಾಯಿತು. ಶ್ರೀಗಳು ಉಡುಪಿ ಪ್ರಾಂತ್ಯ ಧರ್ಮಾಧಿಕಾರಿಯಾಗಿ ವಾಗೀಶ ಶಾಸ್ತ್ರೀ ಅವರನ್ನು ನೇಮಕಗೊಳಿಸಿದರು. ನಂತರ ಶ್ರೀಗಳು ಕಾಸರಗೋಡಿಗೆ ಭೇಟಿ ನೀಡಿದರು.