ಸಿಗಡಿ ಕೃಷಿಗೆ ಆಧುನಿಕ ತಂತ್ರಜ್ಞಾನ

meenu new
Published on

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ದೈಹಿಕ ನ್ಯೂನತೆಯಿದ್ದರೂ ಸೋಲುವುದಿಲ್ಲ ಎಂಬ ಹಠ, ಮೇಲೆದ್ದು ಬರುವ ಛಲ, ಗೆಲ್ಲಲೇಬೇಕೆಂಬ ವಿಶ್ವಾಸವಿದ್ದರೆ ತರರಿಗೆ ಮಾದರಿಯಾಗಿ ಬೆಳೆಯಬಹುದು ಎಂಬುದಕ್ಕೆ ಕುಂದಾಪುರ ತಾಲೂಕಿನ ಸೇನಾಪುರದ ಬಂಟ್ವಾಡಿ ವಿಶ್ವನಾಥ ಶೆಟ್ಟಿ ಗುಡ್ಡಮ್ಮಾಡಿ ನಿದರ್ಶನ. ಅಪಘಾತದಿಂದ ಬಲಭಾಗದ ಸ್ವಾಧೀನ ತಪ್ಪಿದರೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಿಗಡಿ ಕೃಷಿ ಮೂಲಕ ಮಾದರಿ ಸಾಧನೆ ಮಾಡಿದ್ದಾರೆ. ಎರಡು ದಶಕದ ಹಿಂದೆ ತಲ್ಲೂರು ಬಳಿ ಸಂಭವಿಸಿದ್ದ ಅಪಘಾತದ ಬಳಿಕ ವಿಶ್ವನಾಥ ಶೆಟ್ಟಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿದ್ದರು. ದೇಹದ ಬಲಭಾಗ ಬಲ ಕಳೆದುಕೊಂಡರೂ ಸಿಗಡಿ ಕೃಷಿ ಮೂಲಕ ಸ್ವಾಭಿಮಾನಿ ಬದುಕು ರೂಪಿಸಿಕೊಂಡಿದ್ದಾರೆ.

ಕರಾವಳಿ ತೀರದಲ್ಲಿ ಹೆಚ್ಚು ಬಳಕೆಯಲ್ಲಿದ್ದಿದ್ದು ಟೈಗರ್ ಸಿಗಡಿ. ಟೈಗರ್ ಸಿಗಡಿಗೆ ಮದ್ದಿಲ್ಲದ ಬಿಳಿ ಚುಕ್ಕೆ ರೋಗ ಬಂದರೆ ಇಡೀ ಕೆರೆಯ ಸಿಗಡಿಯನ್ನು ನುಂಗಿಹಾಕುತ್ತದೆ. ಟೈಗರ್ ಸಿಗಡಿ ಬದಲು ಪ್ರಸಕ್ತ ಮನೋಡಾನ್ ಸಿಗಡಿ ಹೆಚ್ಚು ಜನಪ್ರಿಯ. ಇದಕ್ಕೆ ರೋಗಬಾಧೆ ಕಡಿಮೆಯಿದ್ದರೂ ರೋಗಮುಕ್ತವಲ್ಲ. ಸಿಗಡಿ ತಿಂದ ಆಹಾರ ಬಿಳಿ ಹಿಕ್ಕೆಯಾಗಿ (ವೈಟ್ ಪೀಕಡ್) ಬಂದರೆ ರೋಗ ತಾಗಿದೆ ಎಂದೇ ಅರ್ಥ.

ನರ್ಸರಿ ಸಿಸ್ಟಮ್ ಆರಂಭ

ರೋಗ ಮುಕ್ತ ಸಿಗಡಿ ಕೃಷಿಗಾಗಿ ವಿಶ್ವನಾಥ ಶೆಟ್ಟಿ ನೇರವಾಗಿ ಹೊಳೆಯಿಂದ ನೀರು ಸಂಗ್ರಹಣಾ ಘಟಕದಲ್ಲಿ ಹೊಳೆ ನೀರು ಶೇಖರಿಸಿ, ಅಲ್ಲಿಂದ ಪರಿಶುದ್ಧ ನೀರು ಕೆರೆಗೆ ಹಾಯಿಸಿದರು. ಸಿಗಡಿ ಕೆರೆ ನೀರು ದಪ್ಪವಾದರೆ ಹಾಗೂ ಬಣ್ಣಗೆಟ್ಟರೆ ಅದನ್ನು ಶುದ್ಧೀಕರಿಸಿ ಮತ್ತೆ ಕೆರೆಗೆ ಹಾಯಿಸಬೇಕು. ಹಕ್ಕಿ ಹಿಕ್ಕೆ, ಏಡಿಯಿಂದ ಸಿಗಡಿಗೆ ರೋಗ ಬರುವ ಅಪಾಯವಿದ್ದು, ಇಂಟೆನ್ಯೂ ಕೇರ್, ಬಯೋಸೆಕ್ಯೂರೆಟ್ ಅಳವಡಿಸಿಕೊಳ್ಳಲಾಗಿದೆ. ರೋಗ ಮುಕ್ತ ಹಾಗೂ ಹೆಚ್ಚು ಸಿಗಡಿ ಕೃಷಿ ಹಿನ್ನೆಲೆಯಲ್ಲಿ ಹೊಸದಾಗಿ ನರ್ಸರಿ ಸಿಸ್ಟಮ್ ಆರಂಭಿಸಿದ್ದಾರೆ. ನರ್ಸರಿಯಿಂದ ಕೆರೆಗೆ ಬಂದ ಸಿಗಡಿ ಫೀಡಿಂಗ್ ಜಾಸ್ತಿ ಮಾಡುವುದರಿಂದ ಬೇಗ ಬೆಳೆಯುತ್ತದೆ. 120 ದಿನದ ನಂತರ ಸಿಗಡಿ ಹಿಡಿಯಲು ಬರಲಿದ್ದು, 30ರಿಂದ 40 ಕೌಂಟ್ ಬಂದರೆ ಮಾತ್ರ ಮಾಡಿದ ಕೆಲಸಕ್ಕೆ ಬೆಲೆ ಸಿಗುತ್ತದೆ.

ಊರುಗೋಲು ಸಹಾಯವಿಲ್ಲದೆ ಹೆಜ್ಜೆ ಇಡಲಾಗುತ್ತಿರಲಿಲ್ಲ. ಎಡವಿ ಬಿದ್ದರೆ ಬೇರೆಯವರು ಏಳಿಸಬೇಕಿತ್ತು. ಒಂಟಿತನದ ಜತೆ ಭವಿಷ್ಯ ನೆನೆಸಿಕೊಂಡು ಭಯವಾಗುತ್ತಿತ್ತು. ಪರಿಹಾರವಾಗಿ ಸಿಗಡಿ ಕೃಷಿ ಆಯ್ಕೆ ಮಾಡಿಕೊಂಡೆ. 20 ವರ್ಷಗಳಿಂದ ಸಿಗಡಿ ಕೃಷಿ ಮಾಡುತ್ತಿದ್ದು, ಬದುಕಿಗೆ ಹೊಸ ದಿಕ್ಕು ತೋರಿಸಿದೆ.

ವಿಶ್ವನಾಥ ಶೆಟ್ಟಿ, ಸಿಗಡಿ ಕೃಷಿಕ

ಆಂಧ್ರದಲ್ಲಿ ಸಿಗಡಿ ಕೃಷಿಯಾಗಿ ಪರಿಗಣಿಸಿದ್ದು, ಕಡಿಮೆ ದರದಲ್ಲಿ ವಿದ್ಯುತ್ ನೀಡಲಾಗುತ್ತಿದೆ. ರಾಜ್ಯದಲ್ಲ್ಲೂ ಸಿಗಡಿಯನ್ನು ಕೃಷಿಯಾಗಿ ಪರಿಗಣಿಸಬೇಕು. ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯಿಲ್ಲದೆ ಮಾರುಕಟ್ಟೆ ಏರುಪೇರಾದರೆ ನಷ್ಟ ಆಗುತ್ತದೆ. ಆಂಧ್ರದಲ್ಲಿ ಸಿಗಡಿ ಕೃಷಿಯಿಂದ 500 ಕೋಟಿ ರೂ. ವಿದೇಶಿ ವಿನಿಮಯವಿದ್ದು, ಅಗತ್ಯ ವ್ಯವಸ್ಥೆ ಕಲ್ಪಿಸಿದರೆ ರಾಜ್ಯದಲ್ಲೂ ಇದು ಆದಾಯದ ಉತ್ತಮ ಮೂಲವಾಗಬಹುದು.

ಬಿ.ವಿ.ಕುಮಾರ್, ಮ್ಯಾನೇಜರ್, ಸಿಪಿ ಆಕೋ ಕಲ್ಚರ್ ಇಂಡಿಯಾ ಪ್ರೈ. ಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net