

ಗೋಕರ್ಣ: ಅಶೋಕೆಯ ಗುರುದೃಷ್ಟಿ ಭವನದಲ್ಲಿ ಆಯೋಜಿತವಾಗಿರುವ 31ನೇ ಅನಾವರಣ ಚಾತುರ್ವಸ್ಯದಲ್ಲಿ 78ನೇ ಸ್ವಾತಂತ್ರ್ಯೊತ್ಸವದ ನಿಮಿತ್ತ ಚಾತುರ್ವಸ್ಯ ದೀಕ್ಷಾಧಾರಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿವರ ಸಾನ್ನಿಧ್ಯದಲ್ಲಿ ಜಿಲ್ಲೆಯ ಸಿದ್ದಾಪುರದ ಸ್ವಾತಂತ್ರ್ಯ ಯೋಧರ ವೀರಗಾಥೆಯ ಅನಾವರಣ ಕೈಗೊಳ್ಳಲಾಯಿತು.
ಸಿದ್ದಾಪುರದ ಸ್ವಾತಂತ್ರ್ಯ ಸೇನಾನಿ ಸತ್ಯನಾರಾಯಣ ಪರಮೇಶ್ವರ ಹೆಗಡೆ ಅವರ ಮಗ ಅನಂತ ಹೆಗಡೆ ಅನಾವರಣ ಮಾಡಿದರು. ಇದೇ ವೇಳೆ ಸ್ವಾತಂತ್ರ್ಯ ಹೋರಾಟಕ್ಕೆ ಶ್ರೀರಾಮಚಂದ್ರಾಪುರ ಮಠ ಮತ್ತು ಅಂದಿನ ಪೀಠಾಧಿಪತಿಗಳ ಕೊಡುಗೆಯನ್ನು ಶ್ರದ್ಧಾಭಕ್ತಿಯಿಂದ ಸ್ಮರಿಸಲಾಯಿತು.
ಶ್ರೀಮಠದ ಆಶ್ರಯ: ಶ್ರೀಮಠ ಪರಂಪರೆಯ 34ನೇ ಪೀಠಾಧಿಪತಿಗಳಾಗಿದ್ದ ಪರಮಪೂಜ್ಯ ಶ್ರೀರಾಮಚಂದ್ರ ಭಾರತೀ ಸ್ವಾಮೀಜಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಶಿರಸಿ, ಸಿದ್ದಾಪುರ, ಸಾಗರ, ಸೊರಬ ಮುಂತಾದೆಡೆಗಳಲ್ಲಿನ ಶ್ರೀಮಠದ ಶಿಷ್ಯಭಕ್ತರಿಗೆ ಸಮಯೋಚಿತ ಸಲಹೆ, ಸಹಕಾರ ಒದಗಿಸುತ್ತಿದ್ದರು. ಬ್ರಿಟಿಷರ ಕಣ್ತಪ್ಪಿಸಿ ಸತ್ಯಾಗ್ರಹ ಮುಂದುವರಿಸಿಕೊಂಡು ಹೋಗಲು ಇವರುಗಳಿಗೆ ಅಲ್ಲಲ್ಲಿ ಆಶ್ರಯ ಕಲ್ಪಿಸಿ ಊಟೋಪಚಾರ ಮತ್ತಿತರ ಅಗತ್ಯ ಸೌಲಭ್ಯ ಕಲ್ಪಿಸಿಕೊಡುತ್ತಿದ್ದರು. ಮಠ ನಿರ್ವಹಣೆಯ ಕಷ್ಟದ ನಡುವೆಯೂ ಆ ಕಾಲದಲ್ಲಿ ಶ್ರೀಗಳು ಸ್ವಾತಂತ್ರ್ಯ ಹೋರಾಟಕ್ಕಾಗಿ 1 ಸಾವಿರ ರೂ. ದೇಣಿಗೆ ಸಮರ್ಪಿಸಿ ಉಜ್ವಲ ರಾಷ್ಟ್ರಪ್ರೇಮದ ಜಾಗೃತಿಗೆ ಸಾರ್ವಕಾಲಿಕ ನಿದರ್ಶನವಾದರು ಎಂದು ಶ್ರೀಮಠ ಮತ್ತು ಅಂದಿನ ಪೀಠಾಧ್ಯಕ್ಷ ಗುರುವರ್ಯರನ್ನು ಅನಾವರಣ ಮುಖೇನ ಸ್ಮರಿಸಿದರು. ಈ ಸಂಬಂಧದ ವಿವಿಧ ಐತಿಹಾಸಿಕ ಚಿತ್ರಗಳನ್ನು ಮತ್ತು ಅಪರೂಪದ ಮಾಹಿತಿಗಳನ್ನು ಈ ವೇಳೆ ಪ್ರದರ್ಶಿಸಲಾಯಿತು.
ಹಿರಿಯ ಲೋಕಸಂಪರ್ಕಾಧಿಕಾರಿ ಸಿದ್ದಾಪುರ ಗೋಳ್ಕೋಡಿನ ಜಿ.ಕೆ. ಹೆಗಡೆ, ಹವ್ಯಕ ಮಹಾಮಂಡಲದ ಪ್ರ. ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಚಾತುರ್ವಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನಕುಮಾರ, ಜಿ.ವಿ. ಹೆಗಡೆ, ಇತರರಿದ್ದರು. ಬಿಂದು ಅವಧಾನಿ ಕಾರ್ಯಕ್ರಮ ನಿರ್ವಹಿಸಿದರು.