ಯಶಸ್ವಿ ಬದುಕಿಗಾಗಿ ಭಗವದ್ಗೀತೆಯ ಓದು ಅಗತ್ಯ

16 Dwd 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಗವದ್ಗೀತೆ ಓದಿದರೆ ಜೀವನ ಸಾರ್ಥಕವಾಗುತ್ತದೆ. ದಿನನಿತ್ಯದ ಜೀವನದಲ್ಲಿ ಭಗವದ್ಗೀತೆಯ ಅಂಶಗಳನ್ನು ಅಳವಡಿಸಿಕೊಂಡರೆ ಯಶಸ್ವಿ ಜೀವನ ನಡೆಸಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.

ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ಅನೇಕ ಹಬ್ಬಗಳಿವೆ. ಪ್ರತಿಯೊಂದು ಹಬ್ಬವೂ ಪೌರಾಣಿಕತೆ ಹಾಗೂ ಆಧ್ಯಾತ್ಮಿಕ ಸಂದೇಶವನ್ನು ಹೊಂದಿದೆ. ಶ್ರೀಕೃಷ್ಣ ಜಯಂತಿಯು ಜೀವನದ ಮೌಲ್ಯಗಳನ್ನು ನೆನಪಿಸುವ ಆತ್ಮಸ್ಪರ್ಶಿ ಸಂಭ್ರಮವಾಗಿದೆ ಎಂದರು.

ದಾವಣಗೇರೆಯ ವಿನ್ನರ್ಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ನಾಗರಾಜ ಎಸ್. ಅವರು ಶ್ರೀಕೃಷ್ಣ ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ದೇವಶಿಖಾಮಣಿ ವಂದಿಸಿದರು.

ಜಿಲ್ಲಾ ಗೊಲ್ಲ, ಯಾದವ ಸಮಾಜದ ಅಧ್ಯಕ್ಷ ಕೆ.ಕೆ. ರಂಗಸ್ವಾಮಿ, ಕಾರ್ಯದರ್ಶಿ ಎಚ್. ಪರಮೇಶ್ವರಪ್ಪ, ಕಾರ್ಯಾಧ್ಯಕ್ಷೆ ನೇತ್ರಾವತಿ ಗೊಲ್ಲರ, ನಿಕಟಪೂರ್ವ ಗೌರವ ಅಧ್ಯಕ್ಷ ಮಹದೇವ ದಂಡಿನ, ವಿಶಾಲ ಗೌಳಿ, ಬಾಬು ಬುರಾನ ಗೌಳಿ ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net