

ಮಡಿಕೇರಿ: ಶ್ರೀಕೃಷ್ಣನ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಹೆಚ್ಚಿನ ಗೌರವ ಮತ್ತು ಭಕ್ತಿ ಇದೆ. ಶ್ರೀಕೃಷ್ಷನ ವೇಷದಲ್ಲಿ ಮಕ್ಕಳನ್ನು ಕಾಣುತ್ತೇವೆ. ಜತೆಗೆ ಶ್ರೀಕೃಷ್ಣನನ್ನು ಮಹಾಭಾರತದಲ್ಲಿ ಸಾರಥಿಯಾಗಿ ನೋಡುತ್ತೇವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ವರ್ಣಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಮಹಾಭಾರತದಲ್ಲಿ ಶ್ರೀಕೃಷ್ಣನ ಬಗ್ಗೆ ಒಳ್ಳೆಯ ಸಂದೇಶ ತಿಳಿಯುತ್ತೇವೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿ ಬದುಕನ್ನು ಉತ್ತಮ ಪಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ಶ್ರೀಕೃಷ್ಣ ಸಾರಿದ್ದಾರೆ ಎಂದರು.
ಜೀವನದಲ್ಲಿ ನಿಂತ ನೀರಾಗದೆ ಹರಿವ ನೀರಿನಂತೆ ಬದುಕನ್ನು ಮುನ್ನಡೆಸಬೇಕು. ಉತ್ತಮ ಬದುಕು ರೂಪಿಸಿಕೊಳ್ಳಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಮಹಾಭಾರತದಲ್ಲಿ ಶ್ರೀಕೃಷ್ಣನ ಸಂದೇಶಗಳು ಧನಾತ್ಮಕ ಚಿಂತನೆಯನ್ನು ಒಳಗೊಂಡಿದೆ. ಶ್ರೀಕೃಷ್ಣ ಒಂದು ರೀತಿ ವಿಶಿಷ್ಟ ಚೇತನರಾಗಿದ್ದಾರೆ. ಅರಾಜಕತೆ, ಅಧರ್ಮ ಸಹಿಸುತ್ತಿರಲಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹೇಳಿದರು.
ಭರತಖಂಡದಲ್ಲಿ ಇಡೀ ವೇದಾಂತವನ್ನು ಸುಲಲಿತವಾಗಿ ತಲುಪಿಸಿದವರು ಶ್ರೀಕೃಷ್ಣ ಎಂದರೆ ತಪ್ಪಾಗಲಾರದು. ತತ್ವಶಾಸ್ತ್ರ ಸೇರಿದಂತೆ ಹಲವು ಜ್ಞಾನವನ್ನು ಹೊಂದಿದ್ದ ಶ್ರೀಕೃಷ್ಣರು ಇಡೀ ಭರತ ಖಂಡದಲ್ಲಿ ತಮ್ಮದೇ ಆದ ಇತಿಹಾಸ ಹೊಂದಿದ್ದಾರೆ. ಕವಿಗಳು, ಸಾಹಿತಿಗಳು ಶ್ರೀಕೃಷ್ಣನನ್ನು ವಿವಿಧ ರೀತಿಯಲ್ಲಿ ವರ್ಣಿಸಿದ್ದಾರೆ. ದಾಸ ಪರಂಪರೆ ಸೃಷ್ಟಿಯಾಗಿದ್ದೇ ಶ್ರೀಕೃಷ್ಣರಿಂದ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಅಧ್ಯಯನ ಮಾಡಿದ್ದಲ್ಲಿ ಶ್ರೀಕೃಷ್ಣನ ಮಹತ್ವ ಬಗ್ಗೆ ಅರಿವಾಗುತ್ತದೆ. ಶ್ರೀಕೃಷ್ಣನ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಪತ್ರಕರ್ತ ಚಿ.ನಾ.ಸೋಮೇಶ್ ಮಾತನಾಡಿ, ಶ್ರೀಕೃಷ್ಣ ಜಾತ್ಯಾತೀತ, ಮೇರು ವ್ಯಕ್ತಿತ್ವ ಹೊಂದಿದ್ದರು. ಶ್ರೀಕೃಷ್ಣನ ಇತಿಹಾಸದ ಬಾಲ್ಯವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ದೇಶ ವಿದೇಶಗಳಲ್ಲಿ ಶ್ರೀಕೃಷ್ಣನ ಅಧ್ಯಯನ ಮಾಡಿದ್ದಾರೆ. ಶ್ರೀಕೃಷ್ಣ ಜಗತ್ಪ್ರಸಿದ್ದ ಮೇರು ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅಸೂಯೆ ನಾಶ ಆಗಬೇಕು ಎಂದು ಶ್ರೀಕೃಷ್ಣರು ಬದುಕಿನುದ್ದಕ್ಕೂ ಸಾರಿದ್ದಾರೆ. ಭಗವಾನ್ ಶ್ರೀಕೃಷ್ಣನನ್ನು ವ್ಯಕ್ತಿಯಾಗಿ ನೋಡಬೇಕಿದೆ. ಮಹಾಭಾರತದಲ್ಲಿ ಚತುರನಾಗಿ, ಮಹಾಜ್ಞಾನಿಯಾಗಿ ನೋಡುತ್ತೇವೆ ಎಂದರು.
ಇಸ್ಕಾನ್ ಸಂಸ್ಥೆಯ ಸುದೀರ್‌ಪ್ರಭು ಮಾತನಾಡಿ, ೫೨೫ ವರ್ಷಗಳ ಹಿಂದೆ ಜನ್ಮ ತಾಳಿದ ಶ್ರೀಕೃಷ್ಣನ ಆದರ್ಶ ಗುಣಗಳು ಸಾರ್ವಕಾಲೀಕವಾಗಿವೆ. ಕೃಷ್ಣನ ವ್ಯಕ್ತಿತ್ವದಲ್ಲಿ ಭಗವಾನ್ ಕೃಷ್ಣನನ್ನು ನೋಡಬಹುದಾಗಿದೆ. ಸದಾ ಬಡವರಿಗಾಗಿ ಚಿಂತನೆ ಮಾಡುತ್ತಿದ್ದ ಶ್ರೀಕೃಷ್ಣನ ಜೀವನ ಚರಿತ್ರೆ ತಿಳಿದುಕೊಳ್ಳುವಂತಾಗಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೋರನ ಸರಸ್ವತಿ, ಕಂಚಿ ಕಾಮಾಕ್ಷಿ ದೇವಾಲಯದ ಗೌರವ ಅಧ್ಯಕ್ಷರು ಹಾಗೂ ಗೌಳಿ ಸಮುದಾಯ ಮುಖಂಡರಾದ ಜಿ.ವಿ.ರವಿಕುಮಾರ್, ಇಸ್ಕಾನ್ ಸಂಸ್ಥೆಯ ಚೈತನ್ಯದಾಸ್ ಪ್ರಭು, ಬಸವರಾಜ ಪ್ರಭು, ಕಂಚಿ ಕಾಮಾಕ್ಷಮ್ಮ ದೇವಾಲಯ ಸಮಿತಿಯ ಅಧ್ಯಕ್ಷ ಪವನ್.ಜಿ.ಬಿ., ಗೌರವಾಧ್ಯಕ್ಷರಾದ ಜಿ.ಜಿ.ಬಾಲಕೃಷ್ಣ ಇತರರು ಇದ್ದರು.
ನಿವೃತ್ತ ಶಿಕ್ಷಕ ಬಿ.ಸಿ.ಶಂಕರಯ್ಯ ನಾಡಗೀತೆ ಹಾಡಿ, ಶ್ರೀಕೃಷ್ಣನ ಕುರಿತು ಹಾಡು ಹಾಡಿ ಗಮನ ಸೆಳೆದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಅವರು ಸ್ವಾಗತಿಸಿದರೆ, ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.