'ಅಪ್ರತಿಮ ತಂತ್ರಜ್ಞಾನಿ, ದೈವ ವ್ಯಕ್ತಿತ್ವವೇ ಶ್ರೀಕೃಷ್ಣ'

KRISHNA JAYANTHI HELD AT KIRU RANGAMANDIRA
KRISHNA JAYANTHI HELD AT KIRU RANGAMANDIRA
Published on

ಮೈಸೂರು: ಇಡೀ ಜಗತ್ತನ್ನು ತನ್ನ ಶಕ್ತಿ-ಯುಕ್ತಿಗಳಿಂದ ಇಟ್ಟುಕೊಳ್ಳುವಂತಹ ಅಪ್ರತಿಮ ತಂತ್ರಜ್ಞಾನಿ, ಮಹಾನ್ ವ್ಯಕ್ತಿ ಶ್ರೀಕೃಷ್ಣ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಬಣ್ಣಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ ಕಲಾಮಂದಿರದ ಕಿರುರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಕೃಷ್ಣ ಎಲ್ಲ ಬಗೆಯ ಗುಣಗಳನ್ನು, ಬಾಂಧವ್ಯಗಳನ್ನು ಹೊಂದಿದ್ದ ಮಹಾಮಹಿಮ. ಅಸಂಖ್ಯಾತ ಬಾಲ ಲೀಲೆಗಳ ಪ್ರತಿನಿಧಿ. ಅಮರ ಪ್ರೇಮದ ಸಂಕೇತ. ಅಪ್ರತಿಮ ತಂತ್ರಜ್ಞಾನಿ, ಇಡೀ ಜಗತ್ತನ್ನು ತನ್ನ ಶಕ್ತಿ-ಯುಕ್ತಿಗಳಿಂದ ಇಟ್ಟುಕೊಳ್ಳುವಂತಹ ಮಹಾನ್ ದೈವ ಶ್ರೀಕೃಷ್ಣ. ಕೃಷ್ಣ ಅಸಾಧ್ಯ ಬುದ್ಧಿವಂತ. ತನ್ನ ಸ್ನೇಹಿತರಿಗೆ ಉತ್ತಮ ಗೆಳೆಯನಾಗಿದ್ದ. ಯುದ್ಧ ತಂತ್ರ ಕಲೆ, ಯುದ್ಧ ಮುನ್ನಡೆಸುವ ಕಲೆ, ಯುದ್ಧ ನಡೆಯದ ರೀತಿಯಲ್ಲಿ ತಡೆಯುವ ಬುದ್ಧಿಜೀವಿಯಾಗಿದ್ದನು. ಇಡೀ ಲೋಕದ ಒಳಿತಿಗೆ ಪ್ರತಿಯೊಬ್ಬ ಮನುಷ್ಯನೂ ಹೇಗೆ ಇರಬೇಕೆಂಬ ವಿವೇಕವನ್ನು ತಿಳಿಸಿದ ದೈವ ವ್ಯಕ್ತಿತ್ವವೇ ಶ್ರೀಕೃಷ್ಣ ಎಂದರು.
ಧರ್ಮರಾಜ್ಯ ಸ್ಥಾಪನೆಗಾಗಿ ನಾವು ಮಾಡುವ ಕಾಯಕದಲ್ಲಿ ನಿಷ್ಠೆಯಿಂದ ಇರಬೇಕು ಎಂಬುದನ್ನು ಗೀತೆಯ ಮೂಲಕ ತಿಳಿಸಿದ ಅಪ್ರತಿಮ. ಶತಮಾನಗಳ ಹಿಂದೆಯೇ ಕನಕದಾಸರು ಹೇಳಿರುವಂತೆ ತಂದೆ-ತಾಯಿಯನ್ನು ಬಿಟ್ಟೇನು, ರಾಜ್ಯವನ್ನು ಬಿಟ್ಟೇನು, ಏನನ್ನಾದರೂ ಬಿಟ್ಟೇನು, ಆದರೆ ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಎಂದು ಹಾಡಿದ್ದಾರೆ ಎಂದು ಹೇಳಿದರು.
ಸಾಹಿತಿ ಡಾ.ಎನ್.ಕೆ.ರಾಮಶೇಷನ್ ಮಾತನಾಡಿ, ಭಗವಾನ್ ವಿಷ್ಣುವಿನ ಒಂಬತ್ತನೇ ಅವತಾರವಾದ ಕೃಷ್ಣ ಜನ್ಮ ಸ್ಮರಣೆಯನ್ನು ಈ ಜಯಂತಿ ಸೂಚಿಸುತ್ತದೆ. ಆವಣಿ ಅಥವಾ ಶ್ರಾವಣ ಮಾಸದಲ್ಲಿ ಕ್ಷೀಣಿಸುತ್ತಿರುವ ಚಂದ್ರನ ಅವಧಿಯ ಕೃಷ್ಣ ಪಕ್ಷದ 8ನೇ ದಿನ ಕೃಷ್ಣ ಜನಿಸಿದನು. ಸುಮಾರು 5000 ವರ್ಷಗಳ ಹಿಂದೆ ದ್ವಾಪರ ಯುಗದಲ್ಲಿ ಅಧರ್ಮವನ್ನು ನಾಶಪಡಿಸಲು ಮತ್ತು ಜಗತ್ತಿನಲ್ಲಿ ಸದಾಚಾರವನ್ನು ನೀಡಲು ಜನಿಸಿದರು. ಅಲ್ಲಿಯವರೆಗೆ ನರಳುತ್ತಿದ್ದ ಮನುಕುಲಕ್ಕೆ ಶ್ರೀಕೃಷ್ಣನ ಜನನ ಆಶಾಕಿರಣ ಮೂಡಿಸಿತು ಎಂದು ತಿಳಿಸಿದರು.
ಶ್ರೀಕೃಷ್ಣ ಎಲ್ಲವನ್ನು ಬಲ್ಲವನು. 18 ಅಕ್ಷೋಹಿಣಿ ಸೈನ್ಯವನ್ನು ತಿಳಿದವನು. ಮಥುರಾ ಮತ್ತು ಗೋಕುಲದಲ್ಲಿ ಇದ್ದ ಕೃಷ್ಣ, ರಾಜ್ಯವನ್ನು ಆಳದೆ ಇದ್ದರೂ ರಾಜ್ಯವನ್ನು ಆಳಿಸಿ, ರಾಜ್ಯಭಾರ ಮಾಡುತ್ತಿದ್ದನು. ಸಂಸ್ಕೃತವನ್ನು ಬಲ್ಲವನಾದ ಶ್ರೀ ಕೃಷ್ಣ ಸಂಸ್ಕೃತಿಯ ಒಡೆಯ, ನಾಯಕ, ರಕ್ಷಕ ಎಂದು ಹೇಳಬಹುದು ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಡಿ.ಅಶೋಕ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಇನಿದನಿ ಜಾನಪದ ಕಲಾ ಸಂಸ್ಥೆಯ ಕಾ.ರಾಮೇಶ್ವರಪ್ಪ, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net