

ಶೃಂಗೇರಿ: ಸಮಸ್ತ ಜಗತ್ತಿನಲ್ಲಿ ಪ್ರಾಣಿಗಳು ಹಾಗೂ ಮನುಷ್ಯರನ್ನು ಕರ್ಮದ ಅನುಸಾರವಾಗಿ ಭಗವಂತ ಸೃಷ್ಟಿ ಮಾಡಿದ್ದು, ಎಲ್ಲ ಜೀವಿಗಳಿಗೂ ಅವರ ಅವಶ್ಯಕತೆಗಳಿಗೆ ಬೇಕಾಗುವ ವ್ಯವಸ್ಥೆಯನ್ನು ಕಲ್ಪಿಸಿದ್ದಾನೆ. ಕಾಡಿನಲ್ಲಿ ಪ್ರಾಣಿಗಳಿಗೆ, ನಾಡಿನಲ್ಲಿ ಮಾನವನಿಗೆ ಸಕಲ ಸವಲತ್ತುಗಳನ್ನು ನೀಡಿದ ಶಕ್ತಿಗೆ ನಾವು ಸದಾ ಋಣಿಯಾಗಿರಬೇಕು ಎಂದು ಶ್ರೀಮಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಶ್ರೀಮಠದ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಶುಕ್ರವಾರ ‘ಶ್ರೀರಾಮಾಮೃತ ತರಂಗಿಣಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಪಂಚಕ್ಕೆ ಧರ್ಮವೇ ಆಧಾರ. ಧರ್ಮವನ್ನು ಶ್ರದ್ಧೆಯಿಂದ ಅನುಷ್ಠಾನ ಮಾಡಿದವರನ್ನು ಭಗವಂತ ರಕ್ಷಿಸುತ್ತಾನೆ. ಅಧರ್ಮದ ಹಾದಿಯಲ್ಲಿ ಹೋಗುವವನಿಗೆ ದೇವರು ತಕ್ಕ ಶಿಕ್ಷೆ ನೀಡಿ ಬಳಿಕ ಆತನು ಧರ್ಮದ ದಾರಿಯಲ್ಲಿ ನಡೆಯುವಂತೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಾನೆ ಎಂದು ಹೇಳಿದರು.
ಭಾರತದಲ್ಲಿ ಸನಾತನ ಧರ್ಮದ ಅವನತಿಯಾಗುವ ಸಂದರ್ಭದಲ್ಲಿ ದೇವರು ವಿವಿಧ ರೂಪದಲ್ಲಿ ಅವತಾರ ಎತ್ತಿದ್ದಾನೆ. ಧರ್ಮದ ಮುಂದೆ ಆಸ್ತಿ, ಅಧಿಕಾರ ನಗಣ್ಯ. ಭಗವಂತನ ಅವತಾರಗಳಲ್ಲಿ ಶ್ರೀರಾಮನಿಗೆ ಶ್ರೇಷ್ಠವಾದ ಸ್ಥಾನವಿದೆ. ಪಿತೃವಾಕ್ಯ ಪರಿಪಾಲನೆ, ಭಾತೃಪ್ರೇಮ ಮುಂತಾದ ಮೌಲ್ಯಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ನುಡಿದಂತೆ ನಡೆದ ಶ್ರೀರಾಮ ಆದರ್ಶ ಪುರುಷ ಎಂದರು.
ಅನಾದಿ ಕಾಲದಿಂದಲೂ ನಾವು ರಾಮನವಮಿ, ಶ್ರೀರಾಮ ಉತ್ಸವ ಮುಂತಾದ ಧಾರ್ವಿುಕ ಪ್ರಕ್ರಿಯೆ ನಡೆಸುತ್ತ ಬಂದಿದ್ದೇವೆ. ರಾಮನಾಮ ಜಪಕ್ಕೆ ಅಪಾರ ಮಹತ್ವವಿದೆ. ಸದಾಕಾಲ ರಾಮನಾಮ ಉಚ್ಛಾರಣೆಯಿಂದ ನಮ್ಮ ಪಾಪ ತೊಳೆಯುತ್ತದೆ ಎಂದು ಹೇಳಿದರು.
ರಥಯಾತ್ರೆಗೆ ಶ್ರೀಮಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರೀಶಂಕರ್ ಚಾಲನೆ ನೀಡಿದರು. ಶ್ರೀ ಶಂಕರಾಚಾರ್ಯ ವೃತ್ತದಿಂದ ಸಾಗಿಬಂದ ರಥಕ್ಕೆ ಶ್ರೀಹೆಬ್ಬಾಗಿಲು, ಶ್ರೀವೆಂಕಟರಮಣ ದೇವಾಲಯ, ಶ್ರೀ ಚಪ್ಪರದಾಂಜನೇಯ, ಶ್ರೀ ಕನ್ನಿಕಾಪರಮೇಶ್ವರಿ ಹಾಗೂ ಶ್ರೀರಾಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾದ್ಯ, ಶ್ರೀಮಠದ ಆನೆಗಳು, ತಾಲೂಕಿನ ವಿವಿಧ ಭಜನಾ ಮಂಡಳಿಗಳು ಮೆರವಣಿಗೆಗೆ ಸಾಥ್ ನೀಡಿದವು. ಶ್ರೀರಾಮ ವಿಗ್ರಹಕ್ಕೆ ಕಿರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು.