

ತರೀಕೆರೆ: ಅಜ್ಜಂಪುರ ತಾಲೂಕಿನ ಹಿರೇಕಾನವಂಗಲ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ಕೆಂಡೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಪ್ರಾತಃ ಕಾಲ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಹಾಲು, ತುಪ್ಪ, ಮೊಸರು, ಎಳನೀರು, ಜೇನುತುಪ್ಪ, ಸುಗಂಧ ದ್ರವ್ಯಾಧಿಗಳಿಂದ ಅಭಿಷೇಕ ನೆರವೇರಿಸಲಾಯಿತು. ವಿವಿಧ ಬಗೆಯ ಹೂವುಗಳಿಂದ ಅಲಂಕಾರಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಳಗ್ಗೆ ಗಂಟೆ 7.15ಕ್ಕೆ ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ರಂಗನಾಥ ಸ್ವಾಮಿ ಹಾಗೂ ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿ ಸಮ್ಮುಖದಲ್ಲಿ ಹಿರೇಕಾನವಂಗಲ, ಸಿದ್ದಾಪುರ, ಜಲ್ದಿಹಳ್ಳಿ, ಚಿಕ್ಕಾನವಂಗಲ, ಜಾವೂರು, ಹೊಸಳ್ಳಿ ಇತರ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಭಕ್ತರು ಕೊಂಡ ಹಾಯ್ದು ಭಕ್ತಿ ಸಮರ್ಪಿಸಿದರು.