

ಹೂವಿನಹಡಗಲಿ: ಹಾಲುಮತ ಸಮುದಾಯದ ಎಲ್ಲರೂ ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠ ತಿಂಥಣಿಬ್ರಿಡ್ಜ್ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಶ್ರಾವಣ ಮಾಸದ ಹಾಲು ಮತ ಧರ್ಮ ಸಭೆಯನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು. ಹಾಲುಮತ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ. ಸಮಾಜದ ಪ್ರತಿಯೊಬ್ಬನೂ ಇದನ್ನು ತಿಳಿಯಬೇಕು ಮತ್ತು ಧಾರ್ಮಿಕವಾಗಿ ಜಾಗೃತನಾಗಬೇಕು. ಮಕ್ಕಳನ್ನು ಹೆಚ್ಚು ಶಿಕ್ಷಣವಂತರನ್ನಾಗಿ ಮಾಡಬೇಕು. ಹಾಗಾದರೆ ಮಾತ್ರ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾಧ್ಯ ಎಂದರು.
ನಮ್ಮಲ್ಲಿ ಇರುವ ಮೌಢ್ಯ ಹೋಗಲಾಡಿಸಲು ಶಿಕ್ಷಣ ಮುಖ್ಯವಾಗಿ ಬೇಕಿದೆ. ನಮ್ಮ ಸಂಸ್ಕೃತಿ ಆಚಾರ-ವಿಚಾರಗಳನ್ನು ಉಳಿಸಿ ಬೆಳಸಿಕೊಂಡು ಹೋಗಬೇಕು. ಇದನ್ನು ನಮ್ಮ ಮುಂದಿನ ಪೀಳಿಗೆಗೆ ಬಿಟ್ಟು ಕೊಡಬೇಕು. ಹಾಲಮತದವರು ಪ್ರಕೃತಿ ಆರಾಧಕರು. ಭೂಮಿಯನ್ನು ಪೂಜಿಸುವ ಸಂಪ್ರದಾಯ ನಮ್ಮಲ್ಲಿದೆ. ಈ ಎಲ್ಲ ಆಚಾರ-ವಿಚಾರ, ಸಂಪ್ರದಾಗಳನ್ನು ನಾವು ಉಳಿಸಿಕೊಂಡು ಹೋಗಬೇಕಾಗಿದೆ. ಡೊಳ್ಳು, ಶಿವನ ಡಮರುಗದ ಪ್ರತೀಕ. ಅದನ್ನು ವಿನಾಃ ಕಾರಣ ಎಲ್ಲೆಂದರಲ್ಲಿ ಬಾರಿಸುವ ಹವ್ಯಾಸ ಇಟ್ಟುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಪ್ರದೇಶ ಕುರುಬ ಸಂಘದ ನಿರ್ದೇಶಕ ಬಿ.ಹನುಮಂತಪ್ಪ ಕಾಗಿನೆಲೆ ಕನಕ ಗುರುಪೀಠದ ಶ್ರೀಗಳು ಶೈಕ್ಷಣಿಕವಾಗಿ ನಮ್ಮ ಸಮಾಜದಲ್ಲಿ ಕ್ರಾಂತಿ ಮಾಡ ಹೊರಟಿದ್ದಾರೆ. ನಾವೆಲ್ಲರೂ ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕಾಗಿದೆ. ಸಮಾಜವನ್ನು ಒಗ್ಗೂಡಿಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸಲು ಮೇಲಿಂದ ಮೇಲೆ ಇಂತಹ ಕಾರ್ಯಕ್ರಮಗಳು ನಡೆಯಬೇಕು. ಸಮಾಜ ಎಲ್ಲ ಜನ ಹೆಚ್ಚುಹೆಚ್ಚು ಮಠದ ಜತೆಯಲ್ಲಿ ಸಂಪರ್ಕವನ್ನು ಇಟ್ಟುಕೊಳ್ಳಬೇಕು ಎಂದರು.
ಬರುವ ದಿನಗಳಲ್ಲಿ ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠ ಮೈಲಾರದಲ್ಲಿ ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಿ ಶಾಲೆ, ಕಾಲೇಜು ಪ್ರಾರಂಭ ಮಾಡಲಿದ್ದು ಸಮಾಜದ ಭಾಂಧವರು ತಮ್ಮ ಮ್ಕಕಳನ್ನು ಹೆಚ್ಚು ಶಿಕ್ಷಣವಂತರನ್ನಾಗಿ ಮಾಡಲು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹೊಸ್ಕೇರಿ ಬೀರಪ್ಪ ಮಾತನಾಡಿ, ನಮ್ಮ ಸಮಾಜದಲ್ಲಿ ಜಾಗೃತಿ ಮೂಡಿಸಲು ರಾಜ್ಯದ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪನೆ ಮಾಡಲಾಗಿದೆ. ಗುರುಗಳ ಮಾರ್ಗದರ್ಶನದಲ್ಲಿ ನಾವು ನಡೆಯಬೇಕು ಎಂದರು.
ತಾಲೂಕು ಎಸ್.ಟಿ ಹೋರಾಟ ಸಮಿತಿಯ ಅಧ್ಯಕ್ಷ ವಿಶ್ವನಾಥ ಹಳ್ಳಿಗುಡಿ ಮಾತನಾಡಿ, ಶ್ರೀಗಳು ಹಮ್ಮಿಕೊಂಡಿರುವಂತಹ ಧಾರ್ಮಿಕ ಜಾಗೃತಿ ಕಾರ್ಯಕ್ರಮ ಶ್ಲಾಘನೀಯ. ಭಂಡಾರ ಸಂಸ್ಕೃತಿಯ ಪರಂಪರೆಯನ್ನು ಹೊಂದಿರುವ ನಾವು ಅದನ್ನು ತಿಳಿಸುಕೊಳ್ಳುವುದು ಬಹುಮುಖ್ಯ ಎಂದರು.
ನಿವೃತ್ತ ಪ್ರಾಚಾರ್ಯ ಕೊಟ್ರಪ್ಪ ಐನಳ್ಳಿ, ಕೆ.ಜಿ.ಹನುಮಂತಪ್ಪ, ಕರೆಗಾರ್ ಕೊಟ್ರಪ್ಪ, ಮಾತನಾಡಿದರು. ಪ್ರಮುಖರಾದ ಕೆ.ಪ್ರಕಾಶ್, ಆರ್.ವೆಂಕಣ್ಣ, ಕೆ.ಸುರೇಶ್, ಈಟಿ ಪರಮೇಶ್, ಎಂ.ಪಂಚಾಕ್ಷರಿ ಇತರರು ಇದ್ದರು.