

ಉಮದಿ: ಮನುಷ್ಯ ನಿಸರ್ಗದ ಸೌಂದರ್ಯವನ್ನು ಅನುಭವಿಸುತ್ತ ನಗುನಗುತ್ತ ಬದುಕಬೇಕು. ಆಕಾಶ, ಭೂಮಿ, ನೀರು, ಸೂರ್ಯ, ಚಂದ್ರ ಎಲ್ಲವೂ ಯಾರೊಬ್ಬರ ಸೊತ್ತು ಅಲ್ಲ. ಇವುಗಳನ್ನು ಎಲ್ಲರಿಗೂ ಅನುಭವಿಸುವ ಹಕ್ಕಿದೆ. ನಿಸರ್ಗದ ಪರಿಸರದಲ್ಲಿರುವ ಗಾಳಿ, ಹಸಿರು, ವನಸಿರಿ ಇವೆಲ್ಲವೂ ದೇವರ ಸ್ವರೂಪಗಳಾಗಿವೆ. ಮನುಷ್ಯ ಅವುಗಳನ್ನು ಗೌರವಿಸಬೇಕು ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಬಾಲಗಾವ-ಕಾತ್ರಾಳ ಗುರುದೇವಾಶ್ರಮದಲ್ಲಿ ಗುರುವಾರ ಆಧ್ಯಾತ್ಮಿಕ ಪ್ರವಚನದಲ್ಲಿ ಆಶೀರ್ವಚನ ನೀಡಿದ ಅವರು, ದೇವರು ನಿರ್ಮಾಣ ಮಾಡಿದ ಈ ಸುಂದರ ನಿಸರ್ಗವನ್ನು ನೂರು ವರ್ಷಗಳ ಕಾಲ ನೋಡಿದರೂ ಸಾಲದು. ಇಲ್ಲಿನ ನದಿ, ಕೊಳ , ಝರಿಗಳಿಂದ ಹೊರ ಹೊಮ್ಮುವ ಇಂಪಾದ ಶಬ್ದ ಹಾಗೂ ಹಕ್ಕಿ ಪಕ್ಷಿಗಳಿಂದ ಬರುವ ಸುಂದರ ಕಲರವವನ್ನು ಅನುಭವಿಸಲು ಮನುಷ್ಯನಿಗೆ ನೂರು ವರ್ಷವೂ ಕಡಿಮೆಯಾಗುತ್ತದೆ. ಆ ದೇವರ ಸೃಷ್ಟಿಯೇ ವಿಸ್ಮಯವಾಗಿದೆ. ಏಕೆಂದರೆ ನಮ್ಮ ಸುತ್ತಲಿರುವ ಬಣ್ಣ ಬಣ್ಣದ ಹೂವುಗಳೇ ಇದಕ್ಕೆ ಸಾಕ್ಷಿ. ಮನುಷ್ಯ ಪಕ್ಷಿಗಳ ಹಾಗೆ ಬದುಕಲು ಕಲಿಯಬೇಕು. ಅವುಗಳಲ್ಲಿ ನಮ್ಮ ಹಾಗೆ ಸುಂದರ ಮನೆಯಿಲ್ಲ, ಬ್ಯಾಂಕಿನಲ್ಲಿ ಹಣವಿಲ್ಲ. ಆದರೂ ಯಾವುದೇ ಪಕ್ಷಿ ನಮ್ಮ ಹಾಗೆ ಚಿಂತೆ ಮಾಡದೆ ತನ್ನ ಜೀವಿತಾವಧಿಯವರೆಗೂ ನಿಸರ್ಗದ ಜತೆ ಸಂತೋಷವಾಗಿ ಹಾಡುತ್ತ ನಲಿಯುತ್ತ ಕಾಲ ಕಳೆಯುತ್ತದೆ. ಆದರೆ, ಮನುಷ್ಯ ಲಕ್ಷಾಂತರ ರೂಪಾಯಿಗಳ ಹಾಗೂ ಒಳ್ಳೆಯ ಹುದ್ದೆ ಮತ್ತು ಸುಂದರ ಮನೆ ಹೊಂದಿದ್ದರೂ ಆಸೆಯ ಹಿಂದೆ ಓಡುತ್ತ ನಿರಾಸೆಗೊಳಗಾಗಿ ದುಃಖ ಪಡುತ್ತಾನೆ. ಇದರ ಬದಲು ಮನುಷ್ಯ ದೇವರಿಗೆ ಕೃತಜ್ಞನಾಗಬೇಕು ಎಂದರು.
ದೇವರು ಮನುಷ್ಯನ ಮೇಲೆ ಮಾಡುವ ಕೃಪೆ ಬಹಳಷ್ಟಿದೆ. ನಾವು ಇರುವ ಸ್ಥಳದಿಂದ ಬಹೂದೂರ ಇರುವ ಸಾಗರದ ನೀರನ್ನು ನಾವು ಇರುವಲ್ಲಿಗೆ ಮೋಡಗಳ ಮೂಲಕ ಇಲ್ಲಿ ಮಳೆ ರೂಪದಲ್ಲಿ ಸುರಿಸುವುದು ದೇವರು ಮಾಡುವ ದೊಡ್ಡ ಚಮತ್ಕಾರ ಅಲ್ಲವೆ?
ನಾವು ದೇವರಲ್ಲಿ ನನಗೆ ಚೆನ್ನಾಗಿ ಬದುಕುವ ಕಲೆ ನೀಡು ಎನ್ನುವುದನ್ನು ಬೇಡಿಕೊಳ್ಳಬೇಕು. ಹಾಗೂ ನಿಸರ್ಗವನ್ನು ನಾನು ಎಂದಿಗೂ ಕೆಡಿಸುವುದಿಲ್ಲ ಎನ್ನುವ ಪ್ರಾರ್ಥನೆ ಮಾಡಬೇಕು. ಮನುಷ್ಯ ಏನನ್ನೂ ಸೃಷ್ಟಿಸಲಾರ. ದೇವರ ಸೃಷ್ಟಿಯನ್ನು ಅನುಭವಿಸುವುದು ಮಾತ್ರ ಅವನಿಂದ ಸಾಧ್ಯ. ದೇವರಿಗೆ ಪ್ರಿಯವಾಗುವ ರೀತಿಯಲ್ಲಿ ನಮ್ಮ ಬದುಕು ಸಾಗಬೇಕು. ಆವಾಗ ಮಾತ್ರ ದೇವರು ಮತ್ತೆ ಮತ್ತೆ ನಿಸರ್ಗದ ಸೌಂದರ್ಯ ಸವಿಯಲು ಈ ಭೂಮಿಗೆ ಕಳುಹಿಸುತ್ತಾನೆ. ನಾವೆಲ್ಲರೂ ದೇವರ ಸೇವೆ ಮಾಡುತ್ತ ನಿಸರ್ಗದ ಸವಿಯನ್ನು ಸವಿಯುತ್ತ ಆನಂದದಿಂದ ಬದುಕುವುದಕ್ಕಾಗಿ ಈ ಭೂಮಿಗೆ ಬಂದಿರುವುದು. ಇದನ್ನು ತಿಳಿದು ನಾವೆಲ್ಲರೂ ಬದುಕಬೇಕು. ಸೌರಮಂಡಲದಲ್ಲಿನ ಬೇರೆ ಗೃಹಗಳಿಗೆ ಹೋಲಿಸಿದರೆ ಭೂಮಿಯೇ ಸ್ವರ್ಗ. ಇಲ್ಲಿ ಎಲ್ಲವೂ ಇದೆ. ವಿಜ್ಞಾನಿಗಳು ನೂರಾರು ವರ್ಷಗಳಿಂದ ಸಂಶೋಧನೆ ಮಾಡಿ ನೋಡಿದರೂ ಭೂಮಿಯಂತಹ ಗೃಹ ಇನ್ನೊಂದು ಸಿಕ್ಕಿಲ್ಲ. ಅಂದರೆ ನಾವೆಲ್ಲರೂ ಭಾಗ್ಯವಂತರು. ಇಂತಹ ಸುಂದರವಾದ ನಿಸರ್ಗವನ್ನು ಪಡೆದು ಅದರ ಜತೆ ಬದುಕುವ ನಾವೇ ಧನ್ಯರು ಎಂದರು.
ನೀವೆಲ್ಲರೂ ದೇವರ ಸೃಷ್ಟಿ ಅಂದ ಮೇಲೆ ನೀವು ದೇವರುಗಳೇ. ಇಲ್ಲಿ ದೇವರಗಳಂತೆ ಬದುಕು ಸಾಗಿಸಬೇಕು. ಬಸವೇಶ್ವರರು ಹೇಳಿದಂತೆ ಎನ್ನಕಾಲೆ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ ಎನ್ನುವಂತೆ ದೇವರು ನಿರ್ಮಿಸಿದ ಗುಡಿಗಳು ನೀವೆಲ್ಲ. ನಿಸರ್ಗದ ಸಂಗವೇ ಸತ್ಸಂಗ ಎಂದು ಹೇಳಿದರು.
ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಗದಗಿನ ಬ್ರಹನ್ಮಠದ ಜಗದ್ಗುರು ಸದಾಶಿವಾನಂದ ಹಾಗೂ ಬಾಲಗಾವ-ಕಾತ್ರಾಳದ ಗುರದೇವಾಶ್ರಮದ ಡಾ. ಅಮೃತಾನಂದ ಸ್ವಾಮೀಜಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಶ್ರದ್ಧಾನಂದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಶಿವಪ್ಪ ಶರಣರು, ಈಶಪ್ರಸಾದ ಸ್ವಾಮೀಜಿ, ಪ್ರಜ್ಞಾನಂದ ಸ್ವಾಮೀಜಿ, ಗಿರೀಶಾನಂದ ಸ್ವಾಮೀಜಿ, ಹರ್ಷಾನಂದ ಸ್ವಾಮೀಜಿ, ಮಾಜಿ ಶಾಸಕ ವಿಲಾಸರಾವ ಜಗತಾಪ, ಆರ್.ಕೆ. ಪಾಟೀಲ, ಎಸ್.ಕೆ. ಹೋರ್ತಿಕರ, ಸಂಜು ತೇಲಿ ಸೇರಿ ಉಮದಿ, ಬಾಲಗಾವ, ಹಳ್ಳಿ, ಕಾತ್ರಾಳ,ಜಿಗಜೇವಣಿ, ಸಂಖ ಗ್ರಾಮದ ಸಾವಿರಾರು ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.