ಲೋಕ ಕಲ್ಯಾಣಕ್ಕೆ ಶ್ರಮಿಸಿದ ಶಿವಕುಮಾರ ಶ್ರೀ

mysore
Published on

ಮೈಸೂರು: ಲೋಕ ಕಲ್ಯಾಣಕ್ಕಾಗಿ ದಣಿವರಿಯದೆ ತಮ್ಮ ಬದುಕನ್ನೇ ಮುಡುಪಾಗಿಟ್ಟು ಸಿದ್ಧ್ದಗಂಗೆಯನ್ನು ಶಿಕ್ಷಣ ಕಾಶಿಯನ್ನಾಗಿಸಿದ ಶ್ರೀ ಶಿವಕುಮಾರ ಸ್ವಾಮೀಜಿ ಕಾರ್ಯ ಅವಿಸ್ಮರಣೀಯವಾದದ್ದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಆರ್.ಎಚ್.ಪವಿತ್ರಾ ಹೇಳಿದರು.


ಜೀವಧಾರ ರಕ್ತ ನಿಧಿ ಕೇಂದ್ರದ ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರ 117ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ತ್ರಿವಿಧ ದಾಸೋಹದ ಮೂಲಕ ದೇಶದಲ್ಲಿ ಬಸವ ತತ್ವ ಭಿತ್ತಿ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಿಸುವಂತಹ ಸಾಧನೆ ಮಾಡಿರುವ ಶ್ರೀಗಳು ಮನುಕುಲಕ್ಕೆ ಮಾದರಿ ಎಂದು ಬಣ್ಣಿಸಿದರು.


ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಸ್ವಾಮೀಜಿಯು ಧರ್ಮ, ಜಾತಿ, ವರ್ಣ ಭೇದ ಇಲ್ಲದೆ ಲಕ್ಷಾಂತರ ಜನರಿಗೆ ಶಿಕ್ಷಣ ನೀಡುವ ಮೂಲಕ ಜ್ಞಾನದ ಬೆಳಕು ತೋರಿದರು. ತಮ್ಮ ಬದುಕನ್ನು ಸಮಾಜ ಸೇವೆಗೆ ಮುಡುಪಾಗಿಟ್ಟ ಅವರು ಮಹಾನ್ ಮಾನವತಾವಾದಿ. ಸಿದ್ಧಗಂಗಾಮಠದಲ್ಲಿ ಶಿಕ್ಷಣ ಪಡೆದ ಬಹುತೇಕ ಜನರು ಉನ್ನತ ಸ್ಥಾನಗಳಲ್ಲಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.


ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಶ್ರೀಗಳು ರಾಜ್ಯದಲ್ಲಿ ಅಕ್ಷರ ಕ್ರಾಂತಿ ಮಾಡಿದರು. ಸರಳ ಸಜ್ಜನಿಕೆಯ ಅವರು ವಿವಿಧ ಕ್ಷೇತ್ರಗಳ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ. ಜಾತ್ಯತೀತ ತತ್ವ ಮೈಗೂಡಿಸಿಕೊಂಡಿದ್ದ ಶ್ರೀಗಳು ನಿಜಕ್ಕೂ ಪವಾಡ ಪುರುಷರು. ಬಸವಣ್ಣರ ತತ್ವಾದರ್ಶವನ್ನು ಕಾರ್ಯರೂಪಕ್ಕೆ ತಂದ ಅಪರೂಪದ ತಪಸ್ವಿ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸಲಾಯಿತು. ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಬಿಜೆಪಿ ಮುಖಂಡರಾದ ಸರಸ್ವತಿ ಪ್ರಸಾದ್, ಕೇಬಲ್ ವಿಜಿ, ಹೇಮಂತ್, ಚಂದ್ರು, ರಶ್ಮಿ, ಗಣೇಶ್ ಬಾವುಸಾರ್, ರಶ್ಮಿ, ಗಣೇಶ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net