ಶ್ರೀ ಶಾರದಾಂಬೆ ದರ್ಶನ ಪಡೆದ ಆರೋಗ್ಯ ಸಚಿವ

dinesh
ಶೃಂಗೇರಿ ಗುರುನಿವಾಸದಲ್ಲಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ಮಾಡಿದರು. ಪತ್ನಿ ತಬಸ್ಸುಮ್ ರಾವ್, ಶಾಸಕ ಟಿ.ಡಿ.ರಾಜೇಗೌಡ, ಉಮೇಶ್ ಪೊದುವಾಳ್ ಇತರರಿದ್ದರು.
Published on

ಶೃಂಗೇರಿ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪತ್ನಿ ಜತೆ ಶುಕ್ರವಾರ ಶ್ರೀ ಶಾರದಾ ಮಠಕ್ಕೆ ಭೇಟಿ ನೀಡಿ ದೇವಿಯ ದರ್ಶನ ಮಾಡಿದರು. ಶ್ರೀ ಶಾರದಾಂಬೆ, ತೋರಣಗಣಪತಿ, ಶಕ್ತಿಗಣಪತಿ, ಶ್ರೀ ವಿದ್ಯಾಶಂಕರ ದೇವಾಲಯ, ಶ್ರೀ ಶಂಕರಾಚಾರ್ಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಗುರುನಿವಾಸದಲ್ಲಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರನ್ನು ದರ್ಶಿಸಿ ಆಶೀರ್ವಾದ ಪಡೆದರು. ಮಳೆ-ಬೆಳೆ ಸಕಾಲಕ್ಕೆ ಆಗಲಿ, ರಾಜ್ಯ ಸುಭಿಕ್ಷೆಯಾಗಲಿ, ಜನಸಾಮಾನ್ಯರಿಗೆ ಇನ್ನಷ್ಟು ಸೇವೆ ನೀಡುವ ಭಾಗ್ಯ ನಿಮ್ಮದಾಗಲಿ ಎಂದು ಕಿರಿಯ ಶ್ರೀಗಳು ಸಚಿವರಿಗೆ ಆಶೀರ್ವದಿಸಿದರು.
ನಂತರ ಸುದ್ದಿಗಾರರೊಂದಿಗೆ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯದ 108 ಆಂಬುಲೆನ್ಸ್ ಸೇವೆ ನಿರಂತರವಾಗಿ ಮುನ್ನಡೆಯಬೇಕಿದೆ. ಸುಸಜ್ಜಿತ ಆಂಬುಲೆನ್ಸ್‌ನ್ನು ಪ್ರತಿ ಸರ್ಕಾರಿ ಆಸ್ಪತ್ರೆಗೆ ತಲುಪಿಸುವ ಹೊಣೆಗಾರಿಕೆ ಇದೆ. ಡಯಾಲಿಸಿಸ್ ಕೇಂದ್ರದ ನಿರ್ವಹಣೆಯನ್ನು ಸರ್ಕಾರ ನಡೆಸುವುದೋ ಅಥವಾ ಖಾಸಗಿಯವರಿಗೆ ಗುತ್ತಿಗೆಗೆ ನೀಡುವುದೋ ಎಂಬುದರ ಕುರಿತು ಚರ್ಚೆ ಮಾಡಬೇಕಿದೆ ಎಂದು ಹೇಳಿದರು.
ಪಟ್ಟಣದಲ್ಲಿ ನೂರು ಬೆಡ್ ಆಸ್ಪತ್ರೆಗೆ ಖಾಸಗಿ ಜಾಗ ಖರೀದಿಸಿ ಎಂದು ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಮುಖ್ಯಸ್ಥರು ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದರು. ಸಮಿತಿ ಮುಖ್ಯಸ್ಥ ರಂಜಿತ್ ಮಾತನಾಡಿ, 16 ವರ್ಷಗಳಿಂದ ಆಸ್ಪತ್ರೆಗಾಗಿ ಸಮಿತಿ ನಿರಂತರ ಹೋರಾಟ ಮಾಡುತ್ತಿದೆ. ಶೃಂಗೇರಿ ಪ್ರವಾಸಿ ಕೇಂದ್ರ. ಇಲ್ಲಿ ನೂರು ಬೆಡ್ ಆಸ್ಪತ್ರೆ ಅಗತ್ಯವಿದೆ ಎಂದು ಸಚಿವರಿಗೆ ಮನವಿ ಮಾಡಿದರು. ಮನವಿ ಸ್ವೀಕರಿಸಿ ಸಚಿವ ಮಾತನಾಡಿ, ಸಮಸ್ಯೆ ಗಮನದಲ್ಲಿದ್ದು ಜಾಗ ಖರೀದಿಗೆ ಸರ್ಕಾರದ ಜತೆ ಚರ್ಚಿಸಲಾಗುವುದು ಎಂದರು.
ಹಣ ವಂಚನೆ ಚೈತ್ರಾ ಕುಂದಾಪುರ ಪ್ರಕರಣವನ್ನು ಸಂಬಂಧಪಟ್ಟ ಇಲಾಖೆಗೆ ನೀಡಲಾಗಿದೆ ಎಂದರು.
ಶಾಸಕ ಟಿ.ಡಿ.ರಾಜೇಗೌಡ, ಸಮಿತಿಯ ಶ್ರೀಜಿತ್, ಅಂಜನ್ ಗೌಡ, ನಿರಂಜನ್, ಎಐಸಿಸಿ ಕಾರ್ಯದರ್ಶಿ ಸಂದೀಪ್, ಕಾಂಗ್ರೆಸ್ ಮುಖಂಡರಾದ ವಿಜಯ್‌ಕುಮಾರ್, ನಟರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net