

ಕಡೂರು: ತುಳಿತಕ್ಕೊಳಗಾದ ಸಮಾಜವಾದರೂ ಬಂಜಾರ ಸಮಾಜದ ಜನರು ಸ್ವಾತಂತ್ರ್ಯ ಚಳವಳಿಯಲ್ಲೂ ಪಾಲ್ಗೊಂಡಿದ್ದಾರೆ. ನಾಡು ಕಟ್ಟುವಲ್ಲಿ ತಮ್ಮದೇ ಆದ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ ಎಂದು ಚಿತ್ರದುರ್ಗ ಸೇವಾಲಾಲ್ ಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.
ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಜಿಲ್ಲಾ ಮತ್ತು ತಾಲೂಕು ಬಂಜಾರ ಸಮಾಜ ಜಂಟಿಯಾಗಿ ಆಯೋಜಿಸಿದ್ದ ಸಂತ ಸೇವಾಲಾಲ್ 281ನೇ ಜಯಂತ್ಯುತ್ಸವ ಮತ್ತು ಬಂಜಾರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕಲಬುರಗಿಯಲ್ಲಿ ನಿರ್ವಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಹೆಸರನ್ನು ನಾಮಕರಣ ಮಾಡುವ ಮೂಲಕ ಬಂಜಾರ ಸಮಾಜಕ್ಕೆ ನ್ಯಾಯ ಒದಗಿಸುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಲ್ಲಲ್ಲಿ ಹರಡಿರುವ ಈ ಸಮಾಜದ ಬೇರುಗಳನ್ನು ಗಟ್ಟಿಗೊಳಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಮಾತನಾಡಿ, ಉನ್ನತ ಶಿಕ್ಷಣ ಪಡೆಯುವ ಮೂಲಕ ಬಂಜಾರ ಸಮಾಜ ಮುಖ್ಯವಾಹಿನಿಗೆ ಬರಬೇಕು. ಸಮಾಜವು ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ. ಇತ್ತೀಚಿಗೆ ಈ ಸಮಾಜದ ಜನರು ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಅದೇ ರೀತಿ ರಾಜಕೀಯವಾಗಿಯೂ ಬಂಜಾರ ಸಮಾಜ ಬಲಿಷ್ಠವಾಗುತ್ತಿರುವುದು ಸಮಾಜದ ಏಳಿಗೆಯ ಸಂಕೇತ.
ಗಾಯಕ ಹನುಮಂತ ಮಾತನಾಡಿ, ಸಮಾಜದಲ್ಲಿ ಜನಿಸಿ ಈ ಎತ್ತರಕ್ಕೆ ಸಾಧನೆ ಮಾಡುವಲ್ಲಿ ತಮಗೆ ಕೈಹಿಡಿದು ಪ್ರೋತ್ಸಾಹಿಸಿದ ಸಮಾಜದ ಜನರೂ ಮತ್ತು ಇತರೆ ಜನರನ್ನು ವಿನಮ್ರವಾಗಿ ಸ್ಮರಿಸಿಕೊಳ್ಳುತ್ತೇನೆ ಎಂದರು.
ತಾಂಡಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಾಲರಾಜ್ ಮಾತನಾಡಿ, ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಚಟುವಟಿಕೆಗೆ ಸಂಬಂಧಿಸಿ ಬಂಜಾರ ಸಮಾಜದ ಕೊಡುಗೆ ಅಪರಿಮಿತ. ಸಮಾಜದಲ್ಲಿ ಹಾಸುಹೊಕ್ಕಾಗಿರುವ ವಿವಿಧ ಕಲೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ದೃಷ್ಟಿಯಿಂದ 2018ರ ಬಳಿಕ ಕಲಾಮೇಳ ಕಾರ್ಯಕ್ರಮವನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಅನೇಕ ಪ್ರತಿಭೆಗಳು ಈ ಮೂಲಕ ಹೊರಹೊಮ್ಮುತ್ತಿವೆ ಎಂದು ತಿಳಿಸಿದರು.
ಜಿಪಂ ಸದಸ್ಯೆ ಲೋಲಾಕ್ಷಿಬಾಯಿ, ತಾಪಂ ಸದಸ್ಯರಾದ ದೇವರಾಜ ನಾಯ್ಕ, ಆನಂದ ನಾಯ್ಕ, ಪ್ರೇಮಾ ಕೃಷ್ಣಮೂರ್ತಿ, ಪುರಸಭಾ ಸದಸ್ಯರಾದ ಮೋಹನ್ಕುಮಾರ್, ರವಿ ರಾಥೋಡ್, ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಲಕ್ಷ್ಮಣ್ ನಾಯ್ಕ, ತಾಲೂಕು ಸಂಘದ ಅಧ್ಯಕ್ಷ ಕುಮಾರ ನಾಯ್ಕ, ಪ್ರಧಾನ ಕಾರ್ಯದರ್ಶಿ ಎಂ.ಪ್ರಕಾಶ್ ನಾಯ್ಕ, ಮುಖಂಡರಾದ ಮಾಲಿನಿಬಾಯಿ, ರಾಜಾ ನಾಯ್ಕ, ಸತೀಶ್ ನಾಯ್್ಕ ಶ್ರೀನಿವಾಸ ನಾಯ್ಕ, ಬಿಇಒ ಸಿದ್ದರಾಜು, ಕೃಷಿ ಅಧಿಕಾರಿ ಮಂಜುಳಾಬಾಯಿ ಇತರರಿದ್ದರು.