

ತರೀಕೆರೆ: ವಾಸ್ತವ ಗೊತ್ತಿಲ್ಲದೆ ನ್ಯಾ.ಸದಾಶಿವ ಆಯೋಗ ವರದಿ ಅನುಷ್ಠಾನದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ನೀಡಿರುವ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ ಎಂದು ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.
ಮಂಗಳವಾರ ಪಿರಮೇನಹಳ್ಳಿ ಮಾರೇಮಟ್ಟಿ ಶ್ರೀಮಾರಿಕಾಂಬ ದೇವಿ ಸನ್ನಿಧಾನದಲ್ಲಿ ತಾಲೂಕು ಬಂಜಾರ ಸಮುದಾಯದಿಂದ ಆಯೋಜಿಸಿದ್ದ ಚಿಂತನ-ಮಂಥನ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಶಿರಾ ಕ್ಷೇತ್ರದ ಉಪಚುನಾವಣೆ ಪ್ರಚಾರದ ವೇಳೆ ನಳಿನ್ಕುಮಾರ್ ಕಟೀಲ್ ಪರಿಶಿಷ್ಟ ಜಾತಿಯ ಮತ್ತೊಂದು ವರ್ಗದ ಮತದಾರರನ್ನು ಓಲೈಸುವ ಆತುರದಲ್ಲಿ ನ್ಯಾ.ಸದಾಶಿವ ಆಯೋಗ ವರದಿ ಅನುಷ್ಠಾನಗೊಳಿಸುವ ಮಾತನಾಡಿದ್ದಾರೆ. ಈಗಾಗಲೇ ಹೇಳಿಕೆ ಹಿಂಪಡೆಯುವಂತೆ ಎಚ್ಚರಿಕೆ ನೀಡಲಾಗಿದೆ. ಕೆಲವರು ಬಂಜಾರ ಸಮುದಾಯದ ಭಯವಿಲ್ಲದೆಯೂ ಸಮಾಜದ ಬಗ್ಗೆ ಮಾತನಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಸಮುದಾಯದವರು ಸಂಘಟಿತರಾಗಿ ಅಂಥವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಸಮಾಜದಲ್ಲಿ ಪರಸ್ಪರರ ನಡುವೆ ಹೊಂದಾಣಿಕೆ ಭಾವ ಇಲ್ಲದಿರುವುದರಿಂದ ಪ್ರಕೃತಿಯೇ ಕರೊನಾ ಮಾದರಿಯಲ್ಲಿ ಜೀವನ ಪಾಠ ಕಲಿಸಿದೆ. ಪ್ರತಿಯೊಬ್ಬರೂ ಗುರು-ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಸಮಾಜ ನಿರ್ವಣಕ್ಕೆ ಕೈಜೋಡಿಸಬೇಕಿದೆ. ಶ್ರೀಕ್ಷೇತ್ರ ಮಾರೇಮಟ್ಟಿ ಮಾರಿಕಾಂಬ ಸನ್ನಿಧಾನದಲ್ಲಿ ಚಾರಿಟಬಲ್ ಟ್ರಸ್ಟ್ ಸ್ಥಾಪಿಸುವ ಮೂಲಕ ಗೋಶಾಲೆ, ಯೋಗ ತರಬೇತಿ ಕೇಂದ್ರ ನಿರ್ವಿುಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.