ಶ್ರೀಸಾಯಿ ಬಾಬಾ ವಿಗ್ರಹ ಪ್ರತಿಷ್ಠಾಪನೆ ಇಂದಿನಿಂದ

baba 1
Published on

ಹುಬ್ಬಳ್ಳಿ: ಶಿರಡಿ ಮಾದರಿಯಲ್ಲಿ ನಗರದ ಹಳೇ ಕೋರ್ಟ್ ವೃತ್ತದಲ್ಲಿನ ಶ್ರೀ ಶಿರಡಿ ಸಾಯಿ ಮಂದಿರ ಜೀಣೋದ್ಧಾರಗೊಂಡಿದ್ದು, ಇಟಲಿಯಿಂದ ಬಂದಿರುವ ಬಾಬಾ ವಿಗ್ರಹದ ಪ್ರತಿಷ್ಠಾಪನೆ ಮತ್ತು 105ನೇ ಶ್ರೀ ಸಾಯಿ ಬಾಬಾ ಸಮಾಧಿ ಉತ್ಸವ ಕಾರ್ಯಕ್ರಮಗಳು ಅ. 17ರಿಂದ 25ರವರೆಗೆ ಜರುಗಲಿದೆ ಎಂದು ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ ಅಧ್ಯಕ್ಷ ಮಹದೇವ ಮಾಶ್ಯಾಳ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಡಿಯಲ್ಲಿ ಇರುವಂತೆಯೇ ಗರ್ಭಗುಡಿ, ಕಳಸ ನಿರ್ವಿುಸಲಾಗಿದೆ. ಅಲ್ಲದೆ, ಇಟಲಿಯಿಂದ ಶಿಲೆಯನ್ನು ತಂದು ಜೈಪುರದಲ್ಲಿ ಕೆತ್ತನೆ ಮಾಡಲಾಗಿದೆ. ಸಾಯಿಬಾಬಾರ ಮೂರ್ತಿ ಮರುಪ್ರತಿಷ್ಠಾಪನೆ ಮಾಡಲಾಗುವುದು ಎಂದರು.

ಅ. 17ರ ಸಂಜೆ 7 ಗಂಟೆಗೆ ಶ್ರೀ ಸಾಯಿ ಸಮಾಧಿ ಉತ್ಸವದ ಉದ್ಘಾಟನೆಯನ್ನು ಉದ್ಯಮಿ ಸೋಮಶೇಖರ ಹತ್ತಿ ಅವರು ನೆರವೇರಿಸುವರು. 18ರಂದು ಬೆಳಗ್ಗೆ 6ಗಂಟೆಗೆ ಶ್ರೀ ಸಾಯಿ ಸಚ್ಚರಿತ್ರೆ ಪಾರಾಯಣ ಪಠಣವನ್ನು ವಾಣಿ ರಾಜೇಂದ್ರ ಹೂಗಾರ ಅವರು ಉದ್ಘಾಟಿಸುವರು.

19ರಂದು ಬೆಳಗ್ಗೆ 10ಗಂಟೆಗೆ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ. ಧಾರವಾಡ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕಿ ರಂಜನಾ ಪೋಳ ಉದ್ಘಾಟಿಸುವರು. 20ರಂದು ಬೆಳಗ್ಗೆ 8 ಗಂಟೆಗೆ ಕುಂಭ ಮೇಳ ಮತ್ತು ಸಾಯಿಬಾಬಾ ಮೂರ್ತಿ ಮೆರವಣಿಗೆ ನಡೆಯಲಿದೆ. ಉದ್ಯಮಿ ಪ್ರಕಾಶ ಬಾಫಣಾ ಉದ್ಘಾಟಿಸುವರು.

21ರಂದು ಬೆಳಗ್ಗೆ 9 ಗಂಟೆಯಿಂದ ಹೋಮ-ಹವನ ಮತ್ತು ಪೂಜಾ ಕಾರ್ಯಕ್ರಮಗಳು ಜರುಗಲಿವೆ. 22ರಂದು ಬೆಳಗ್ಗೆ 7ಗಂಟೆಯಿಂದ ಗರ್ಭಗುಡಿ ಉದ್ಘಾಟನೆ, ಕಳಾಸರೋಹಣ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಪದ್ಮರಾಜನಗರದ ಅದ್ವೈತ ವಿದ್ಯಾಶ್ರಮದ ಶ್ರೀ ಪ್ರಣವಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಐಎಎಸ್ ಅಧಿಕಾರಿ ಆರ್. ವಿಶಾಲ್ ಉದ್ಘಾಟಿಸುವರು.

24ರಂದು ಬೆಳಗ್ಗೆ 11 ಗಂಟೆಗೆ ಶ್ರೀ ಸಾಯಿ ಸಮಾಧಿ ಉತ್ಸವದ ಮುಖ್ಯ ಸಮಾರಂಭ ನಡೆಯಲಿದೆ. ಉದ್ಯಮಿ ರಿತೇಶ ತಾತುಸ್ಕರ್ ಉದ್ಘಾಟಿಸುವರು. ಗ್ರೂಫ್ ಆಫ್ ಕೆಜಿಪಿ ಸಮೂಹ ಸಂಸ್ಥೆ ಮಾಲೀಕ ಡಾ. ಗಣೇಶ ಶೇಟ್, ನಿವೃತ್ತ ಡಿವಿಜಿನಲ್ ಸೆಕ್ಯೂರಿಟಿ ಕಮಿಷನರ್(ಆರ್​ಪಿಎಫ್) ಕಲ್ಮೇಶ ಕಬ್ಬೂರ, ಪವನ ಗ್ರೂಪ್ ಆಫ್ ಸ್ಕೂಲ್ ಉಪಾಧ್ಯಕ್ಷೆ ರತ್ನಾ ಪಾಟೀಲ ಅತಿಥಿಗಳಾಗಿ ಆಗಮಿಸುವರು ಎಂದು ವಿವರಿಸಿದರು.

ಸಂಜೆ 7ಗಂಟೆಗೆ ಶ್ರೀ ಸಾಯಿ ರಥೋತ್ಸವ ಹಾಗೂ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಶಹರ ತಹಸೀಲ್ದಾರ್ ಕಲಗೌಡ ಪಾಟೀಲ ಉದ್ಘಾಟಿಸುವರು. 25ರಂದು ಸಂಜೆ 7 ಗಂಟೆಗೆ ಶ್ರೀ ಸಾಯಿ ಸಮಾಧಿ ಉತ್ಸವದ ಮುಕ್ತಾಯ ಸಮಾರಂಭ ನಡೆಯಲಿದೆ. ಜಯಲಕ್ಷ್ಮೀ ಅಂಗಡಿ ಉದ್ಘಾಟಿಸುವರು. ಸಂಜೆ 7.30ಕ್ಕೆ ಪಂಡರಪುರ ಸಂಪ್ರದಾಯದ ಪ್ರಕಾರ ವಾರಕರಿ ಭಜನಾ ಕಾರ್ಯಕ್ರಮವನ್ನು ಮಹಾದೇವ ಸುಲಾಖೇ ಮತ್ತು ಸಂಗಡಿಗರಿಂದ ಜರುಗಲಿದೆ ಎಂದು ವಿವರಿಸಿದರು.

ಮಂಡಳಿ ಉಪಾಧ್ಯಕ್ಷ ನರಸಿಂಗಸಾ ರತನ, ಕಾರ್ಯದರ್ಶಿ ಪಿ.ಎನ್. ಧೋಂಗಡಿ, ಸಹ ಕಾರ್ಯದರ್ಶಿ ಪ್ರಕಾಶ ಚಳಗೇರಿ, ಕೋಶಾಧ್ಯಕ್ಷ ಗೋವಿಂದ ಕೋಟಕರ, ನಿರ್ದೇಶಕರಾದ ಬ್ರಜ ಮೋಹನ ಭುತಡಾ, ಪ್ರಿಯಾಂಕಾ ಕಠಾರೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net