ಕೆ.ಆರ್.ನಗರ : ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಶುಗರ್ಸ್ ಲಿಮಿಟೆಡ್ ಜತೆಗೆ ಹೊಸದಾಗಿ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದ್ದಾರೆ.
ನಾನು ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ನಂತರ ಸರ್ಕಾರಕ್ಕೆ ಪತ್ರ ಬರೆದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ್ ಅವರನ್ನು ಹತ್ತಾರು ಬಾರಿ ಭೇಟಿಮಾಡಿ ಈ ಭಾಗದ ಕಬ್ಬು ಬೆಳೆಗಾರರ ಪರವಾಗಿ ಮನವಿ ಮಾಡಲಾಗಿತ್ತು. ಈ ಹಿಂದೆ ಯಾವುದೊ ಕಾರಣಗಳಿಂದ 2012 ರಂದು ಸ್ಥಗಿತಗೊಂಡಿದ್ದ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು 2020-21 ನೇ ಹಂಗಾಮಿನಲ್ಲಿ 40 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಸರ್ಕಾರದ ಅನುಮೋದನೆ ದೊರೆತಿತ್ತು. ಅನುಮೋದನೆಗೆ ಪೂರಕವಾಗಿ ಚುಂಚನ ಕಟ್ಟೆಯ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಶುಗರ್ಸ್ ಲಿಮಿಟೆಡ್ ಅವರಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಗುತ್ತಿಗೆ ಒಪ್ಪಂದದ ಕಾನೂನಾತ್ಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ಹಾಗೂ ನೋಂದಣಿ ಮಾಡದೆ ಆತುರಾತುರವಾಗಿ ಕಾರ್ಖಾನೆಯನ್ನು ಪ್ರಾರಂಭಿಸಿ ಕಾಲಹರಣ ಮಾಡಿದ ಪರಿಣಾಮ ಕಾರ್ಖಾನೆ ಮತ್ತೆ ಮುಚ್ಚುವ ಸ್ಥಿತಿಗೆ ತಂದು ಈ ಭಾಗದ ರೈತರ ಹಿತವನ್ನು ಮತ್ತೊಮ್ಮೆ ಬಲಿಕೊಡಲಾಯಿತು ಎಂದು ಹೇಳಿಕೆಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಮಯದಲ್ಲಿ ಸಕ್ಕರೆ ಸಚಿವರಿಗೆ ಸದನದಲ್ಲಿ ಪ್ರಶ್ನೆ ಕೇಳುವ ಮೂಲಕ ಸರ್ಕಾರದ ಗಮನ ಸೆಳೆಯಲು ಪಯತ್ನ ಪಟ್ಟಿದ್ದೆ. ಇದಕ್ಕೆ ಸಕ್ಕರೆ ಸಚಿವರು ಸದ್ಯದಲ್ಲೆ ಈ ಸಮಸ್ಯೆಯನ್ನು ಬಗೆಹರಿಸುತ್ತೇನೆಂದು ಸಕಾರಾತ್ಮಕವಾಗಿ ಉತ್ತರಿಸಿದ್ದರು. ಇದರ ಫಲವಾಗಿ ಈಗಾಗಲೇ ನಾನು ನಿರಾಣಿ ಶುಗರ್ಸ್ ಲಿಮಿಟೆಡ್ ಮಾಲೀಕರ ಬಳಿ ಕೂಲಂಕಶವಾಗಿ ಚರ್ಚಿಸಿದ್ದೇನೆ. ಕಾಲಮಿತಿಯೊಳಗೆ ಎಲ್ಲ ಕಾನೂನಾತ್ಮಕ ಪ್ರಕ್ರಿಯೆಯನ್ನು ನಿಯಾಮಾನುಸಾರ ಪೂರ್ಣಗೊಳಿಸಲು ತಿಳಿಸಿದ್ದೇನೆ. ಪ್ರಕ್ರಿಯೆ ಮುಗಿದ ನಂತರ ಶೀಘ್ರವೇ ಕಾರ್ಖಾನೆ ಮರು ಆರಂಭ ಮಾಡುವ ಮೂಲಕ ಈ ಭಾಗದ ರೈತರ ಹಾಗೂ ಕಬ್ಬು ಬೆಳೆಗಾರರ ಹಿತ ಕಾಪಾಡಲು ನಾನು ಬದ್ಧನಾಗಿರುತ್ತೇನೆ. ನನ್ನ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.