

ಕೆ.ಆರ್.ಸಾಗರ: ಪಟ್ಟಣದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಮಠದಲ್ಲಿ 353ನೇ ಅರಾಧನೆ ಅಂಗವಾಗಿ ಬುಧವಾರ ಮಧ್ಯಾರಾಧನೆ ನಡೆಯಿತು.
ಮುಖ್ಯ ಅರ್ಚಕರಾದ ಶ್ರೀ ಹಾವೇರಿ ರಾಘವೇಂದ್ರಚಾರ್ಯ ಅವರ ನೇತೃತ್ವದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಪ್ರತಿಮೆಗೆ ಬೆಳಗ್ಗೆಯಿಂದ ಸುಪ್ರಭಾತ, ವೇದ ಪಾರಾಯಣ, ನಿರ್ಮಾಲ್ಯ ವಿಸರ್ಜನೆ ಕಾರ್ಯಕ್ರಮ ನಡೆಯಿತು. ಅಲ್ಲದೆ ಶ್ರೀ ರಾಘವೇಂದ್ರಸ್ವಾಮಿಗೆ ವಿಶೇಷವಾಗಿ ವಿವಿಧ ಹೂಗಳಿಂದ ಅಲಂಕರಿಸಿ, ಉತ್ಸವ ಮೂರ್ತಿ ಬಳಿ ಇರಿಸಿದ ಪಾದುಕೆಗಳಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿದ ನಂತರ ಹಲವಾರು ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರಿಗೆ ಅನ್ನದಾಸೋಹದ ರೂಪದಲ್ಲಿ ಪ್ರಸಾದ ವಿನಿಯೋಗ ಮಾಡಲಾಯಿತು.
ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರತಿಮೆಗೆ ಕಮಲದ ಹೂಗಳು ಹಾಗೂ ವಿವಿಧ ರೀತಿಯ ಹಣ್ಣುಗಳಿಂದ ಅಲಂಕರಿಸಲಾಗಿತ್ತು. ಅರ್ಚಕರಾದ ಸುರೇಂದ್ರಚಾರ್ಯ ಮತ್ತು ಶ್ರೀ ವಿಜೇಂದ್ರಚಾರ್ಯ ಉಪಸ್ಥಿತರಿದ್ದರು.