ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ 28ರಿಂದ

Published on

ಕುಷ್ಟಗಿ: ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ನಿಮಿತ್ತ ಪಟ್ಟಣದ ಅಡವಿ ಮುಖ್ಯ ಪ್ರಾಣೇಶ (ಅಡವಿರಾಯ) ದೇವಸ್ಥಾನದಲ್ಲಿ ಫೆ.28ರಿಂದ ಮಾ.6ವರೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗ್ಗೆ ಸುಪ್ರಭಾತ, ಭಜನೆ ಹಾಗೂ ವಿದ್ವಾಂಸರಿಂದ ಪ್ರವಚನ ನಡೆಯಲಿದೆ.

ಫೆ.28ರ ಸಂಜೆ ಸಪ್ತಾಹ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂತ್ರಾಲಯದ ರಾಯರ ಮಠದ ಶ್ರೀ ಸುಬುಧೇಂದ್ರ ತೀರ್ಥರು, ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಹಾಗೂ ವಿದ್ಯಾರಾಜೇಶ್ವರ ತೀರ್ಥರು ಸಾನ್ನಿಧ್ಯ ವಹಿಸಲಿದ್ದಾರೆ. ಉಡುಪಿಯ ವಿದ್ವಾನ್ ಬಿ.ಎ.ರಾಘವೇಂದ್ರ ದಾಸರಿಂದ ‘ವಾಯುದೇವರ ಭಗವದುಪಾಸನೆ’ ಕುರಿತು ಪ್ರವಚನ ನೀಡಲಿದ್ದಾರೆ. ಮಂತ್ರಾಲಯದ ಡಾ.ರಾಜಾ ಎಸ್.ಗಿರಿಯಾಚಾರ್ಯ, ದಾಸ ಸಾಹಿತ್ಯ ಪ್ರಾಜೆಕ್ಟ್‌ನ ವಿಶ್ರಾಂತ ವಿಶೇಷಾಧಿಕಾರಿ ವಿದ್ಯಾನ್ ಕೆ.ಅಪ್ಪಣ್ಣಾಚಾರ್ಯ, ಪೆದ್ದಚಿಂತರೇವಲದ ಅರ್ಚಕ ಆದ್ಯ ಕೇಶವಾಚಾರ್ಯ ಆಗಮಿಸಲಿದ್ದಾರೆ.

ಮಾ.1ರಂದು ಸಂಜೆ ರಾಯರ ಮಠದಿಂದ ಅಡವಿರಾಯ ದೇವಸ್ಥಾನದವರೆಗೆ ಶ್ರೀ ಗುರುರಾಜರ ಶೋಭಾಯಾತ್ರೆ ನಡೆಯಲಿದೆ. ಕೊನೆಯ ದಿನ ಶ್ರೀ ಗುರುರಾಜರ ಜನ್ಮದಿನ ಕಾರ್ಯಕ್ರಮ ಜರುಗಲಿದೆ. ಮೈಸೂರಿನ ಶ್ರೀ ವ್ಯಾಸರಾಜ ಮಠ (ಸೊಸಲೆ)ಯ ಶ್ರೀ ವಿದ್ಯಾಶ್ರೀಶ ತೀರ್ಥರು ಹಾಗೂ ಮುಳಬಾಗಿಲು ಶ್ರೀ ಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥರು ಸಾನ್ನಿಧ್ಯ ವಹಿಸಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಬ್ರಾಹ್ಮಣ ಸಮುದಾಯದ ಅಧ್ಯಕ್ಷ ಭೀಮಪ್ಪಯ್ಯ ದೇಸಾಯಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net