

ಜಮಖಂಡಿ: ಹಿಂದು ಸನಾತನ ಧರ್ಮವಾಗಿದೆ. ಕೇಸರಿ ಹಿಂದು ಧರ್ಮದ ಸಂಕೇತವಾಗಿದೆ. ಜಾತಿಗೊಂದು ಮಠವಿದ್ದರೂ ಹಿಂದು ಧರ್ಮದ ಶ್ರೀಗಳು ನಮ್ಮ ರಕ್ಷಣೆಗಾಗಿಯೇ ಇದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ತಾಲೂಕಿನ ಜಕನೂರ ಗ್ರಾಮದ ಮಾದಣ್ಣ ಮದಗುಂಡೇಶ್ವರ ಸಿದ್ಧಾಶ್ರಮದಲ್ಲಿ ಹಮ್ಮಿಕೊಂಡಿರುವ ಭಂಡಾರ ಸಂಸ್ಕೃತಿ ಉತ್ಸವ, ಜಾನಪದ ಮತ್ತು ಡೊಳ್ಳಿನ ಕಲಾಮಹೋತ್ಸವ, 29ನೇ ಸಿದ್ಧಸಿರಿ ಸಂಭ್ರಮ-2024 ರ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇವರುಗಳು ಖಡ್ಗ, ಗದೆ, ತ್ರಿಶೂಲ ಹಿಡಿದಿವೆ. ಅದರಂತೆ ನನಗೆ ಮತ್ತು ಈಶ್ವರಪ್ಪನವರಿಗೆ ಮಾದುಲಿಂಗ ಶ್ರೀಗಳು ಹಿಂದು ಧರ್ಮದ ರಕ್ಷಣೆ ಪ್ರತೀಕವಾಗಿ ಖಡ್ಗ ನೀಡಿ ಗೌರವಿಸಿದ್ದಾರೆ. ನಾವು ದೇಶ, ಧರ್ಮ ವಿರೋಧಿಗಳನ್ನು ಎಂದಿಗೂ ಸಹಿಸುವುದಿಲ್ಲ. ನಮ್ಮ ಧರ್ಮ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂದರು.
ಗಣೇಶ ಉತ್ಸವದಲ್ಲಿ ಕೋಮು ಗಲಭೆ ಮಾಡಿ ಹಿಂದುಗಳ ಮೇಲೆ ಕಲ್ಲೆಸೆದು ಗಣೇಶನನ್ನು ಠಾಣೆಗೆ ಒಯ್ದಿರುವುದು ಮತ್ತು ಹಿಂದುಗಳ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿರುವುದು ಖಂಡನೀಯ ಎಂದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಬಾಲಗಂಗಾಧರ ತಿಲಕ ಅವರು ಸ್ವಾತಂತ್ರೃ ಹೋರಾಟದಲ್ಲಿ ಎಲ್ಲರೂ ಒಂದಾಗಲು ಗಣೇಶ ಉತ್ಸವವನ್ನು ಆಚರಣೆಗೆ ತಂದಿದ್ದಾರೆ. ಆದರೆ ಅದಕ್ಕೆ ಕೆಲ ದೇಶದ್ರೋಹಿಗಳು ವಿರೋಧಿಸುತ್ತಿರುವುದು ಖಂಡನೀಯ ಎಂದರು.
ವಿಪ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಮಠ-ಮಂದಿರಗಳು ಭಾವನಾತ್ಮಕ ಧಾರ್ಮಿಕ ಸಂಕೇತವಾಗಿವೆ. ಜನಪದ ಕಲೆ, ಕಲಾವಿದರನ್ನು ಉಳಿಸಿ ಬೆಳೆಸಬೇಕಾಗಿದೆ. ಧಾರ್ಮಿಕ ಆಚರಣೆ, ಪರಂಪರೆ, ಸಂಸ್ಕೃತಿ ಮುಂದುವರಿಯಬೇಕು ಎಂದರು.
ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು, ಓಲೇಮಠದ ಡಾ. ಚನ್ನಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾಶಿ ಪೀಠದ ಜಗದ್ಗುರು ಮಧ್ವಮಲ್ಲಿಕಾರ್ಜುನ ಶಿವಾಚಾರ್ಯರು, ಮುತ್ತಿನಕಂತಿಮಠದ ಶಿವಲಿಂಗಪಂಡಿತಾರಾಧ್ಯ ಶಿವಾಚಾರ್ಯರು, ಕೊಣ್ಣೂರಿನ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು, ಮಾದಣ್ಣ ಮದುಗುಂಡೇಶ್ವರ ಮಹಾರಾಜರು, ಹುಲಜಂತಿ ಮಹಾರಾಜರು, ಮುಕ್ತೇಶ್ವರ ಶ್ರೀಗಳು, ಅಪ್ಪು ಒಡೆಯರ, ರಾಮಾನಂದ ಶ್ರೀಗಳು, ಅಮೋಘಸಿದ್ದ ಶ್ರೀಗಳು, ಹಳಿಂಗಳಿ ಅಲ್ಲಮಪ್ರಭು ಶ್ರೀಗಳು, ಕಲ್ಲೂರ ಶ್ರೀಗಳು, ಮಹಾವೀರಪ್ರಭು ಶ್ರೀಗಳು, ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ವಿಶ್ವ ಹಿಂದು ಪರಿಷತ್ ಧರ್ಮ ಪ್ರಚಾರಕ ವೆಂಕಟೇಶ ದೇಶಪಾಂಡೆ, ನಾಗಪ್ಪ ಸನದಿ ಇತರರು ಇದ್ದರು.
ಸಿದ್ದರಾಮಯ್ಯ ಅವರನ್ನು ಇಳಿಸಲು ಅವರ ಪಕ್ಷದವರೇ ಹಪಹಪಿಸುತ್ತಿದ್ದಾರೆ. ಕೆ.ಎಸ್. ಈಶ್ವರಪ್ಪ ಅವರ ಬೆನ್ನಿಗೆ ಯತ್ನಾಳಗೌಡ ಪಾಟೀಲ ಇದ್ದೇ ಇರುತ್ತಾರೆ. ಯಾವ ಕಾಲಕ್ಕೂ ಈಶ್ವರಪ್ಪ ಅವರನ್ನು ನಾನು ಬಿಟ್ಟುಕೊಡುವುದಿಲ್ಲ. ಹಾಲುಮತ ಸಮಾಜದ ಈಶ್ವರಪ್ಪನವರೇ ಮುಂದಿನ ಮುಖ್ಯಮಂತ್ರಿ. ಅವರ ಜೊತೆಗೆ ನಾನು ಕೂಡ ಮಂತ್ರಿ ಸ್ಥಾನದ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಬಸನಗೌಡ ಪಾಟೀಲ ಯತ್ನಾಳ, ವಿಜಯಪುರ ಶಾಸಕ