

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಯಾಲಕ್ಕಿಶೆಟ್ಟರ್ ಕಾಲನಿ ಜ್ಞಾನೇಶ್ವರ ನಗರದ ಶ್ರೀ ಕಾನಡಾ ವಿಠ್ಠಲ ರುಕ್ಮಿಣಿ ಮಂದಿರ ಸಮಿತಿ ವತಿಯಿಂದ ಆಷಾಢ ಏಕಾದಶಿ ನಿಮಿತ್ತ ಜು. 17ರಂದು ಶ್ರೀ ಪಾಂಡುರಂಗ ಪವಿತ್ರ ಜ್ಯೋತಿ ಯಾತ್ರೆ ಏರ್ಪಡಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಮಾರುತಿ ಭಿಸೆ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ನಗರದ ಗಾಂಧಿಚೌಕ್ ದತ್ತಾತ್ರೇಯ ದೇವಸ್ಥಾನದಿಂದ ನಗರ ಪ್ರದಣೆ ಹಾಗೂ ನಗರ ಸಂಕೀರ್ತನೆ ಕಾರ್ಯಕ್ರಮ ಪಂಢರಿ ಸಂಪ್ರದಾಯದಂತೆ ಭಜನೆ ವಾದ್ಯಗೊಂದಿಗೆ ನಡೆಯಲಿದೆ ಎಂದರು.
ಮರಾಠಾ ವಿದ್ಯಾ ಪ್ರಸಾರಕ ಮಂಡಳ ಅಧ್ಯಕ್ಷ ಮೋಹನ ಮೋರೆ, ಕಾರ್ಯಾಧ್ಯಕ್ಷ ಸುಭಾಷ ಶಿಂಧೆ, ಗೌರವ ಕಾರ್ಯದರ್ಶಿ ರಾಜು ಬಿರ್ಜಣ್ಣವರ, ಉದ್ಯಮಿ ದಿಲೀಪ ಸಿಂಗನಾಥ, ಪಾಂಡುರಂಗ ಜಗದಾಳೆ, ಪ್ರಕಾಶ ಘಾಟಗೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಖಾಯಂ ಪಾದಯಾತ್ರೆ (ದಿಂಡಿ) ಸಂಘದ ಸದಸ್ಯರು ಹಾಗೂ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುಮಾರು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಪಾಲ್ಗೊಳ್ಳುವ ಭಕ್ತರ ಸಂಖ್ಯೆಯೂ ಹೆಚ್ಚಿದೆ. ಈ ವರ್ಷ 500ಕ್ಕೂ ಹೆಚ್ಚುನ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.