ಭಕ್ತರ ಕಷ್ಟ ಪರಿಹರಿಸಿದ್ದ ಶ್ರೀ ನಿರಂಜನ ಸ್ವಾಮೀಜಿ

Huvinshigli viraktamath
Published on

ಸವಣೂರ: ಭಕ್ತರ ಕಷ್ಟ ಪರಿಹಾರ ಮಾಡುವುದರೊಂದಿಗೆ ರೋಗ ನಿವಾರಿಸುವ ಶಕ್ತಿ ಹೊಂದಿದ್ದ ಲಿಂ. ಶ್ರೀ ನಿರಂಜನ ಸ್ವಾಮೀಜಿ ಅವರ ಸ್ಮರಣೆ ಅವಶ್ಯವಾಗಿದೆ ಎಂದು ಮುಂಡರಗಿ ಸಂಸ್ಥಾನಮಠದ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಹೂವಿನಶಿಗ್ಲಿ ವಿರಕ್ತಮಠದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ 46ನೇ ಜಾತ್ರಾ ಮಹೋತ್ಸವ ಉದ್ಘಾಟನೆ, ಲಿಂ. ಶ್ರೀ ನಿರಂಜನ ಸ್ವಾಮೀಜಿ 15ನೇ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಆಯುರ್ವೆದ ಚಿಕಿತ್ಸೆಗೆ ಹೆಸರುವಾಸಿಯಾಗಿದ್ದ ಹೂವಿನಶಿಗ್ಲಿ ವಿರಕ್ತಮಠ ಇಂದು ನೂರಾರು ಅನಾಥ ಮಕ್ಕಳ ಪಾಲನೆ ಮಾಡುತ್ತಿದೆ. ಈ ಮೂಲಕ ರಾಜ್ಯದ ಪ್ರಮುಖ ಮಠಗಳ ಸಾಲಿಗೆ ಸೇರ್ಪಡೆಗೊಳ್ಳಲು ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಚನ್ನವೀರ ಸ್ವಾಮೀಜಿ ಅವರ ಮಾತೃತ್ವ ಹೃದಯ ಪ್ರಮುಖ ಕಾರಣವಾಗಿದೆ ಎಂದರು.

ಬಳೂಟಗಿ ಶಿವಕುಮಾರದೇವರು ನುಡಿ ನಮನ ಸಲ್ಲಿಸಿದರು. ಶಿಗ್ಗಾವಿ ವಿರಕ್ತಮಠದ ಶ್ರೀ ಸಂಗನಬಸವ ಸ್ವಾಮೀಜಿ ಅವರಿಗೆ ವೈದ್ಯ ನಿರಂಜನ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಮಣಕವಾಡ ದೇವಮಂದಿರ ಮಹಾಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ನೇತೃತ್ವ ವಹಿಸಿ, ಲಿಂ. ಶ್ರೀ ನಿರಂಜನ ಸ್ವಾಮೀಜಿ ಅವರ ಕುರಿತು ಆಶೀರ್ವಚನ ನೀಡಿದರು.

ಕಲ್ಯಾಣಪುರ ಅಭಿನವ ಬಸವಣ್ಣಜ್ಜನವರು ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು. ಶ್ರೀಮಠದ ಪೀಠಾಧ್ಯಕ್ಷರಾದ ಚನ್ನವೀರ ಸ್ವಾಮೀಜಿ ಅವರಿಗೆ ಭಕ್ತರಿಂದ ತುಲಾಭಾರ ಸೇವೆ ಸಲ್ಲಿಸಲಾಯಿತು. ಲಕ್ಷೆ್ಮೕಶ್ವರದ ವೇದಿಕಾ ಭರತನಾಟ್ಯ ಶಾಲೆಯ ವಿದ್ಯಾರ್ಥಿಗಳು ಭರತ ನಾಟ್ಯ ಪ್ರದರ್ಶನ ನೀಡಿದರು. ಗುಡ್ಡದ ಅನ್ವೇರಿ ವಿರಕ್ತಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಸವಣೂರ ಮಂಡಳ ನಿಕಟಪೂರ್ವ ಅಧ್ಯಕ್ಷ ಗಂಗಾಧರ ಬಾಣದ ಶ್ರೀರಕ್ಷೆ ಪಡೆದರು. ಶಿಕ್ಷಕ ಕೆ.ಎಸ್. ಇಟಗಿಮಠ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net